ಬೆಂಗಳೂರು: ಕಾರು ಹತ್ತಿಸಿ ಬೀದಿನಾಯಿ ಸಾವು ಪ್ರಕರಣ ಸಂಬಂಧ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಬಂಧಿತ ಕಾರು ಚಾಲಕ ಆದಿಕೇಶವನನ್ನ ತರಾಟೆಗೆ ತೆಗೆದುಕೊಂಡಿದ್ದರು. ಇದೇ ರೀತಿ ಸ್ಯಾಂಡಲ್ವುಡ್ ನಟಿ ರಮ್ಯಾ ಸಹ ಆರೋಪಿಯ ಮೃಗೀಯ ವರ್ತನೆಯನ್ನ ಖಂಡಿಸಿದ್ದರು.
ಶ್ವಾನಪ್ರಿಯರು ಒಗ್ಗೂಡಿ ಮೃತ ಲಾರಾ ಹೆಸರಿನ ನಾಯಿಯ ಅಂತ್ಯ ಸಂಸ್ಕಾರವನ್ನು ಸುಮನಹಳ್ಳಿಯ ಪ್ರಾಣಿಗಳ ಸ್ಮಶಾನದಲ್ಲಿ ನಡೆಸುತ್ತಿದ್ದು, ಅಂತಿಮ ಯಾತ್ರೆಯಲ್ಲಿ ಭಾಗವಹಿಸುವಂತೆ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.
ರಸ್ತೆ ಬದಿ ಮಲಗಿದ್ದ ಲಾರಾ ಮೇಲೆ ಉದ್ಯಮಿ ದಿ. ಆದಿಕೇಶವುಲು ಮೊಮ್ಮಗ ಆದಿ ಕಾರು ಹತ್ತಿಸಿದ್ದ. ತೀವ್ರ ಗಾಯಗೊಂಡು ನಾಯಿ ಮೃತಪಟ್ಟಿತ್ತು. ಶ್ವಾನ ಲಾರಾಗೆ ಇಂದು ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ. ಅಂತಿಮ ಸಂಸ್ಕಾರದಲ್ಲಿ ಎಲ್ಲರೂ ಭಾಗವಹಿಸುವಂತೆ ನಟಿ ರಮ್ಯ ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
ಲಾರಾ ಆ್ಯಕ್ಸಿಡೆಂಟ್ ಡೆತ್ ಕೇಸ್ ಮಿಸ್ಟ್ರಿ..
ಜ.26 ರ ಸಂಜೆ 6 ಗಂಟೆಗೆ ನಾಯಿ ಲಾರಾ ಮೇಲೆ ಕಾರು ಹರಿಸಲಾಗಿತ್ತು. ಘಟನೆ ಬಳಿಕ ಎರಡು ದಿನ ಲಾರಾ ನಾಪತ್ತೆಯಾಗಿದ್ದಳು. ಜ. 28 ರಂದು ಲಾರಾ ಮೇಲೆ ಕಾರು ಹತ್ತಿಸಿದ್ದ ಪ್ರಕರಣ ಬಯಲಿಗೆ ಬಂದಿತ್ತು. ಮನೆಯ ಮುಂದೆ ಸಿಸಿಟಿವಿಯಲ್ಲಿ ಅಪಘಾತ ದೃಶ್ಯ ಸೆರೆಯಾಗಿತ್ತು.
ಜನವರಿ 29 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಬದ್ರಿ ಪ್ರಸಾದ್ ಎಂಬುವರು ದೂರು ನೀಡಿದ್ದರು. ಜ. 31 ರ ಬೆಳಗ್ಗೆ ಘಟನೆ ನಡೆದ ಪಕ್ಕದ ರಸ್ತೆಯ ಚರಂಡಿಯಲ್ಲಿ ಲಾರಾ ಮೃತದೇಹ ಪತ್ತೆಯಾಗಿತ್ತು. ಅದೇ ದಿನ ನಾಯಿಯ ಮೃತದೇಹವನ್ನು ಸಿದ್ದಾಪುರ ಪೊಲೀಸರು ಪೋಸ್ಟ್ ಮಾರ್ಟಮ್ಗೆ ರವಾನಿಸಿದ್ದರು. ಇಂದು ಸಂಜೆ ಸುಮನಹಳ್ಳಿ ಪ್ರಾಣಿ ಸ್ಮಶಾನದಲ್ಲಿ ಲಾರಾ ಅಂತಿಮ ಸಂಸ್ಕಾರ ಜರುಗಲಿದೆ.
ಓದಿ: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ