ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಕೊಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ತಂದೆ ಇಲ್ಲದೆ ವೋಟು ಹಾಕಿದ್ದೇನೆ. ಹೀಗಾಗಿ ಅಪ್ಪ ಇಲ್ಲದೆ ತುಂಬಾ ಬೇಸರವಾಗುತ್ತಿದೆ ಎಂದು ತಂದೆಯನ್ನು ನೆನೆದು ನಟಿ ಹರ್ಷಿಕಾ ಪೂಣಚ್ಚ ಭಾವುಕರಾಗಿದ್ದಾರೆ.
ಹರ್ಷಿಕಾ ಕೆ.ಆರ್. ಪುರ ಕ್ಷೇತ್ರದಲ್ಲಿ ಕಲ್ಕೆರೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.. ಈ ವೇಳೆ ಮಾತನಾಡಿದ ಅವರು ಇದೇ ಮೊದಲ ಬಾರಿಗೆ ತಂದೆ ಅನುಪಸ್ಥಿತಿಯಲ್ಲಿ ಮತಗಟ್ಟೆಗೆ ಬಂದಿದ್ದೇನೆ. ಕಳೆದ ಸಲ ತಂದೆ-ತಾಯಿಯೊಂದಿಗೆ ಬಂದಿದ್ದೆ. ಈ ಬಾರಿ ಒಬ್ಬಂಟಿಯಾಗಿ ಬಂದಿದ್ದೇನೆ ಎಂದು ಹೇಳಿ ಕಣ್ಣೀರಿಟ್ಟರು.
ನಂತರ ಸಮಾಧಾನ ಮಾಡಿಕೊಂಡು ಮಾತನಾಡಿದ ಅವರು ಮತದಾನ ಮಾಡಿದ್ದು ಖುಷಿಯಾಯ್ತು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಮತದಾನ ಮಾಡಬೇಕು. ಯಾರಿಗೂ ವೋಟ್ ಮಾಡಿಲ್ಲ ಅಂದರೆ ನಾವೇ ತೊಂದರೆ ಪಡಬೇಕಾಗುತ್ತದೆ. ಮನೆಯಲ್ಲಿ ಕೂತ್ಕೊಂಡು ಏನೇ ದೂರು ಕೊಟ್ಟರೂ, ಏನು ಪ್ರಯೋಜನ ಆಗಲ್ಲ. ನಮಗೆ ಕೂಡ ವೈಯಕ್ತಿಕ ಕೆಲಸ ಇದೆ ಎಂದು ವೋಟ್ ಹಾಕೋದು ಮರೆಯಬಾರದು ಎಂದರು.