ಬೆಂಗಳೂರು : ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿಯ ಆಮ್ ಆದ್ಮಿ ಪಕ್ಷ ತಂದಿರುವ ಕ್ರಾಂತಿಕಾರಕ ಬದಲಾವಣೆಗಳನ್ನು ಬೆಂಗಳೂರಿಗೂ ತರುವ ಒತ್ತಾಸೆ ಇಟ್ಟುಕೊಂಡು ಅನೇಕ ಕ್ಷೇತ್ರಗಳ ಪ್ರಮುಖರು, ವಿವಿಧ ಪಕ್ಷಗಳ ನಾಯಕರು ಇಂದು ಪಕ್ಷಕ್ಕೆ ಸೇರ್ಪಡೆಯಾದರು.
ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ಉಸ್ತುವಾರಿ ರೋಮಿ ಬಾಟಿ ಪಕ್ಷಕ್ಕೆ ಬರಮಾಡಿಕೊಂಡರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್(ಜಾತ್ಯಾತೀತ ಜನತಾದಳ) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಉದ್ಯಮಿ ನಾಗಣ್ಣ ಅವರ ನೇತೃತ್ವದಲ್ಲಿ ಪ್ರಸಿದ್ದ ಲೆಕ್ಕಪರಿಶೋಧಕ ಮುರೂರು ರಾಜೇಂದ್ರ ಕುಮಾರ್ ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾದರು.
ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಮಾತನಾಡಿ, ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಅತ್ಯುತ್ತಮವಾದ ಬೆಂಬಲ ಗಳಿಸುತ್ತಿದೆ. ನಾಗಣ್ಣ ಅವರಂತಹ ವ್ಯಕ್ತಿಗಳು ಪಕ್ಷಕ್ಕೆ ಸೇರ್ಪಡೆ ಆಗುವ ಮೂಲಕ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ, ಪಕ್ಷಕ್ಕೆ ಇನ್ನಷ್ಟು ಬಲ ತುಂಬಿದ್ದಾರೆ ಎಂದರು.
ಬೆಂಗಳೂರು ಘಟಕ ಆಮ್ ಆದ್ಮಿ ಪಕ್ಷದ ಮೋಹನ್ ದಾಸರಿ ಮಾತನಾಡಿ, 198 ವಾರ್ಡ್‌ಗಳಲ್ಲೂ ಆಪ್ ಸ್ಪರ್ಧೆಗಿಳಿಯಲಿದೆ. ಕೆ ಬಿ ನಾಗಣ್ಣ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ ಎಂದರು. ಈ ವೇಳೆ ಕೆ ಬಿ ನಾಗಣ್ಣ ಮಾತನಾಡಿ, ಮೊದಲಿನಿಂದಲೂ ನಾವು ಭ್ರಷ್ಟಚಾರದ ವಿರುದ್ಧ ಹೋರಾಡುತ್ತಾ ಬಂದಿದ್ದೇವೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಮೂಲಕ ನಾವು ಮುಂದಿನ ಪೀಳಿಗೆಗೆ ಯಾವುದಾದ್ರೂ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆ. ಒಬ್ಬ ವ್ಯಕ್ತಿ ರಾಜಕೀಯ ಅನುಭವ ಇಲ್ಲದೆ, ರಾಜಕೀಯ ಪಕ್ಷ ಕಟ್ಟಿ ಇಂತಹ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ ಎಂದರು.