ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರಿಗೆ ಹೊಸ ರೂಪ ನೀಡುವ ಮಹತ್ವಾಕಾಂಕ್ಷೆ ಹೊಂದಿದ್ದೇನೆ. ಈ ವಿಚಾರವಾಗಿ ಎಲ್ಲಾ ವರ್ಗದ ಜನರ ಸಲಹೆ ಪಡೆಯುತ್ತಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ವರ್ಬ್ ಬ್ಯಾಟಲ್ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಭವಿಷ್ಯದ ಬೆಂಗಳೂರನ್ನು ಮುಂದಿನ ಪೀಳಿಗೆಗಾಗಿ ನಿರ್ಮಾಣ ಮಾಡಬೇಕು. ಇದಕ್ಕಾಗಿ, ಭವಿಷ್ಯದ ಬೆಂಗಳೂರನ್ನು ನಮ್ಮ ದೃಷ್ಟಿಕೋನಕ್ಕಿಂತ ಮಕ್ಕಳ ದೃಷ್ಟಿಕೋನದಲ್ಲಿ ನೋಡಬೇಕು. ಅದಕ್ಕಾಗಿ ಮಕ್ಕಳ ಸಲಹೆ ಪಡೆಯುತ್ತಿದ್ದೇನೆ. ಬೆಂಗಳೂರು ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದೆ ಎಂದರು.
![action-to-give-land-to-farmers-who-lost-land-under-nice-scheme-says-dcm-d-k-shivakumar](https://etvbharatimages.akamaized.net/etvbharat/prod-images/25-07-2023/kn-bng-05-dcm-talk-kempegowda-layout-visit-script-7208077_25072023181709_2507f_1690289229_537.jpg)
ಇಂದು ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಹಸಿರು ಬೆಂಗಳೂರಿನ ಕುರಿತು ಮಾತನಾಡಿದ್ದನ್ನು ಗಮನಿಸಿದೆ. ನಾನು ಸಚಿವನಾದ ನಂತರ ಪರಿಸರದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆಗ ನಾನು, ಪಾಲಿಕೆಯು ಶಾಲಾ ಆಡಳಿತ ಜೊತೆ ಒಡಂಬಡಿಕೆ ಮಾಡಿಕೊಂಡು ನಗರದಲ್ಲಿ ಶಾಲಾ ಮಕ್ಕಳಿಂದ ಗಿಡ ನೆಡಿಸಿ ಅವುಗಳನ್ನು ಬೆಳೆಸುವ ಜವಾಬ್ದಾರಿ ಅವರಿಗೆ ನೀಡಬೇಕು. ಆ ಗಿಡ ಬೆಳೆಸುವ ಮಗುವಿಗೆ ಆ ಮರದ ಬಳಿ ಹೆಸರು ಹಾಕಿಕೊಳ್ಳುವ ಅವಕಾಶ ನೀಡಬೇಕು ಎಂದು ಅಧಿಕಾರಿಗಳೇ ಸೂಚನೆ ನೀಡಿದೆ. ಇಲ್ಲಿನ ಸಂಸ್ಕೃತಿ ಹಾಗೂ ವಾತಾವರಣ ನಮಗೆ ಹೊಂದಿಕೊಳ್ಳುವಂತಿದ್ದು, ನಾವು ಹಸಿರು ಬೆಂಗಳೂರನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
![action-to-give-land-to-farmers-who-lost-land-under-nice-scheme-says-dcm-d-k-shivakumar](https://etvbharatimages.akamaized.net/etvbharat/prod-images/25-07-2023/kn-bng-05-dcm-talk-varbe-program-visit-script-7208077_25072023192019_2507f_1690293019_1062.jpg)
ಬೆಂಗಳೂರಿಗೆ ಹೊಸ ರೂಪ ನೀಡಲು 70 ಸಾವಿರಕ್ಕೂ ಹೆಚ್ಚಿನ ಸಲಹೆಗಳು ಬಂದಿವೆ. ಇವುಗಳ ಜತೆ ಯುವ ಪ್ರತಿಭೆಗಳ ಆಲೋಚನೆಗಳನ್ನು ಪಡೆಯಬೇಕಿದೆ. ಅವರು ಯಾವುದೇ ವೈಯಕ್ತಿಕ ಆಸಕ್ತಿ ಇಲ್ಲದೆ ಸಲಹೆ ನೀಡುತ್ತಾರೆ. ಬೆಂಗಳೂರು ಪೂರ್ವ ನಿಯೋಜಿತ ನಗರವಲ್ಲ. ಇದಕ್ಕೆ ಹೊಸ ರೂಪ ನೀಡುವುದು ಸವಾಲಿನ ಕೆಲಸ. ಇದಕ್ಕಾಗಿ ನಾವು ನಿನ್ನೆ ಬೆಂಗಳೂರು ವಿನ್ಯಾಸಕ್ಕೆ ಅಂತಾರಾಷ್ಟ್ರೀಯ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಇಲ್ಲಿನ ವಾತಾವರಣ ಹಾಗೂ ಸಂಸ್ಕೃತಿಗೆ ಮನಸೋತು ಹೆಚ್ಚಿನ ಸಮಯದಲ್ಲಿ ಬೆಂಗಳೂರಿಗೆ ಬಂದು ಮರಳಿ ತಮ್ಮ ಊರಿಗೆ ಹೋಗುವುದಿಲ್ಲ. ಬೆಂಗಳೂರು ಜ್ಞಾನ, ಶಿಕ್ಷಣ, ಮೆಡಿಕಲ್, ಐಟಿ ರಾಜಧಾನಿ ಆಗಿದೆ. ಇಲ್ಲಿ ಓದಿ ಬೆಳೆದವರು ವಿಶ್ವದ ಪ್ರಮುಖ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಇಲ್ಲಿ ಓದಿದ ಪ್ರತಿಭಾವಂತರು ಹೊರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಕೆಲವರು ಮಾತ್ರ ಇಲ್ಲೇ ಉಳಿಯುತ್ತಿದ್ದಾರೆ. ಕೆಲವೊಮ್ಮೆ ರಾಜಕಾರಣಿಗಳು ಹಾಗೂ ಐಎಎಸ್ ಅಧಿಕಾರಿಗಳಿಗಿಂತ ಮಕ್ಕಳು ಅತ್ಯುತ್ತಮ ಸಲಹೆಗಳನ್ನು ನೀಡುತ್ತಾರೆ. ಹೀಗಾಗಿ ನಾನು ನಿಮ್ಮ ಸಲಹೆ ಪಡೆಯುತ್ತಿದ್ದೇನೆ ಎಂದರು.
![action-to-give-land-to-farmers-who-lost-land-under-nice-scheme-says-dcm-d-k-shivakumar](https://etvbharatimages.akamaized.net/etvbharat/prod-images/25-07-2023/kn-bng-05-dcm-talk-varbe-program-visit-script-7208077_25072023192019_2507f_1690293019_184.jpg)
ಚಿತ್ರನಟ ವಿಜಯ ರಾಘವೇಂದ್ರ ದಂಪತಿಯಿಂದ ಡಿಸಿಎಂ ಭೇಟಿ: ಚಿತ್ರನಟ ವಿಜಯ ರಾಘವೇಂದ್ರ ದಂಪತಿ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಕುಮಾರಕೃಪಾ ಅತಿಥಿ ಗೃಹದಲ್ಲಿ ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಬಿಜೆಪಿ ಮುಖಂಡ, ಮಾಜಿ ಸಚಿವ ಸಿ ಪಿ ಯೋಗಿಶ್ವರ್ ಅವರ ಪುತ್ರಿ ನಿಶಾ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಕುಮಾರಕೃಪಾ ಅತಿಥಿ ಗೃಹದಲ್ಲಿ ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದರು
ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ಕೊಡಿಸಲು ಕ್ರಮ: ನೈಸ್ ರಸ್ತೆ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭರವಸೆ ನೀಡಿದರು. ಬೆಂಗಳೂರಿನ ಸೋಂಪುರ ಗ್ರಾಮದ ರೈತರ ನಿಯೋಗವು ಕುಮಾರಕೃಪಾ ಅತಿಥಿ ಗೃಹದಲ್ಲಿ ಶಿವಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿ ಅಹವಾಲು ಸಲ್ಲಿಸಿದಾಗ ಡಿಸಿಎಂ ಈ ಬಗ್ಗೆ ಭರವಸೆ ನೀಡಿದ್ದಾರೆ.
ನೈಸ್ ರಸ್ತೆಗೆ ನಮ್ಮ ಜಮೀನು ಭೂಸ್ವಾಧೀನ ಮಾಡಿಕೊಂಡು 23 ವರ್ಷಗಳಾಗಿವೆ. ಭೂಮಿಗೆ ಪರಿಹಾರ ಮೊತ್ತ ಸಿಕ್ಕಿದೆ. ಆದರೆ, ನಮಗೆ ನಿವೇಶನ ನೀಡುವ ಭರವಸೆ ಈವರೆಗೂ ಈಡೇರಿಲ್ಲ. ಅಧಿಕಾರಿಗಳನ್ನು ಕೇಳಿದರೆ, ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಯಾವೊಬ್ಬ ರೈತರಿಗೂ ನಿವೇಶನ ಹಂಚಿಕೆ ಮಾಡಿಲ್ಲ. ಸೋಂಪುರ ಗ್ರಾಮಕ್ಕೆ ನೀವು ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಖುದ್ದು ಪರಿಶೀಲಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ರೈತರು ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ವಿಚಾರವಾಗಿ ಮೊನ್ನೆಯಷ್ಟೇ ಅಧಿಕಾರಿಗಳ ಜತೆ ಚರ್ಚಿಸಿದೆ. ಸುಪ್ರೀಂಕೋರ್ಟ್ ನಲ್ಲಿ KIADB ಆಕ್ಟ್ ಹಾಗೂ ಬಿಡಿಎ ಆಕ್ಟ್ನಲ್ಲಿ ಹಳೆ ದರಕ್ಕೆ ಪರಿಹಾರ ನೀಡಬೇಕು ಎಂದು ಆದೇಶ ನೀಡಲಾಗಿದೆ. ಈ ವಿಚಾರವಾಗಿ ಎರಡು ದಿನಗಳಲ್ಲಿ ಮಾತನಾಡುತ್ತೇನೆ. ನಿಮ್ಮ ಮನವಿ ಪರಿಶೀಲಿಸುತ್ತೇನೆ. ನಿವೇಶನ ವಿಚಾರ ನನ್ನ ಗಮನಕ್ಕೆ ಬಂದಿದೆ. ನಿವೇಶನ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಉಳಿದ ವಿಚಾರಗಳನ್ನು ಪರಿಶೀಲನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೆಂಪೇಗೌಡ ಲೇಔಟ್ಗೆ ಭೇಟಿ ಮಾಡಿ ಸಮಸ್ಯೆ ಪರಿಶೀಲಿಸುತ್ತೇನೆ - ಡಿಸಿಎಂ: ಕೆಂಪೇಗೌಡ ಲೇಔಟ್ ನಲ್ಲಿ ಮೂಲಭೂತ ಸೌಕರ್ಯ ಕೊರತೆ ವಿಚಾರವಾಗಿ ಮುಂದಿನ ವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು. ಕೆಂಪೇಗೌಡ ಲೇಔಟ್ ನಿವಾಸಿಗಳ ನಿಯೋಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕುಮಾರಕೃಪಾ ಅತಿಥಿ ಗೃಹದಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಮುಂದಾಗಿದ್ದು, 4040 ಎಕರೆಯಲ್ಲಿ ಈ ಬಡಾವಣೆ ನಿರ್ಮಾಣ ಮಾಡುವ ದೊಡ್ಡ ಯೋಜನೆ ಆಗಿದೆ. ಈ ಯೋಜನೆ ಆಮೆ ಗತಿಯಲ್ಲಿ ಸಾಗುತ್ತಿದ್ದು, ನೀವುಗಳು ಮುಂದೆ ನಿಂತು ಯೋಜನೆ ಪೂರ್ಣಗೊಳಿಸಬೇಕು ಎಂದು ನಿಯೋಗ ಮನವಿ ಮಾಡಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿಗಳು, ನೀವು ಆಘಾತಕಾರಿ ಅಂಶಗಳನ್ನು ಹೇಳುತ್ತಿದ್ದೀರಿ. 4 ಸಾವಿರ ಎಕರೆ ಬಡಾವಣೆಯಲ್ಲಿ ಒಂದು ಆಟದ ಮೈದಾನ ಇಲ್ಲ ಎನ್ನುತ್ತಿದ್ದಾರೆ. ನಾನು ಮುಂದಿನ ವಾರ ಕೆಂಪೇಗೌಡ ಬಡಾವಣೆಗೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಮುಗಿದಿಲ್ಲ, ಅಷ್ಟರಲ್ಲೇ ಸ್ವಪಕ್ಷದವರಿಂದ ಅಪಸ್ವರ: ಜಿ ಟಿ ದೇವೇಗೌಡ ಟೀಕೆ