ಬೆಂಗಳೂರು: ಹೊಸಕೋಟೆಯಲ್ಲಿ ನಾಮಪತ್ರ ವಾಪಸ್ ಪಡೆಯುವಂತೆ ಶರತ್ ಬಚ್ಚೇಗೌಡರಿಗೆ ಸೂಚನೆ ನೀಡಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ವಾಪಸ್ ಪಡೆಯದೇ ಇದ್ದರೆ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ಉಸ್ತುವಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿದ್ದ ಸಣ್ಣಪುಟ್ಟ ಗೊಂದಲಗಳು ನಿವಾರಣೆಯಾಗಿದ್ದು, ಎಲ್ಲಾ ಕಡೆ ಬಿಜೆಪಿ ಗೆಲುವು ಸಾಧಿಸಲಿದೆ. ಹೊಸಕೋಟೆ ಹೊರತುಪಡಿಸಿ ಇತರ ಕಡೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಚುನಾವಣಾ ಉಸ್ತುವಾರಿಗಳು ನೀಡಿದ ವರದಿಗಳ ಕುರಿತು ಸಭೆಯಲ್ಲಿ ಚರ್ಚೆ ಆಯಿತು. 15 ಕ್ಷೇತ್ರಗಳಲ್ಲಿಯೂ ಗೆಲ್ಲುವ ವರದಿಗಳು ಬಂದಿವೆ. ಇದರ ಆಧಾರದಲ್ಲಿ ಸಿಎಂ ಬಿಎಸ್ವೈ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಆರ್.ಅಶೋಕ್, ಜಗದೀಶ್ ಶೆಟ್ಟರ್, ಈಶ್ವರಪ್ಪ, ಶ್ರೀರಾಮುಲು, ಗೋವಿಂದ ಕಾರಜೊಳ ಅವರು ಪ್ರವಾಸ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ನ. 22ರಿಂದ ಚುನಾವಣಾ ಉಸ್ತುವಾರಿಗಳು ಆಯಾ ಕ್ಷೇತ್ರದಲ್ಲಿ ಇರಲಿದ್ದಾರೆ. 23ರಿಂದ ರಾಜ್ಯ ನಾಯಕರಿಂದ ಚುನಾವಣಾ ಪ್ರವಾಸ ಆರಂಭಗೊಳ್ಳಲಿದೆ ಎಂದು ಹೇಳಿದರು.