ಬೆಂಗಳೂರು: ನಗರದಲ್ಲಿ ಗಿಡ, ಮರಗಳಿಗೆ ವಿಷ ಉಣಿಸುವ ಕಿಡಿಗೇಡಿಗಳ ಕೃತ್ಯ ಮತ್ತೇ ನಡೆದಿದೆ. ಇಲ್ಲಿನ ಬನಶಂಕರಿಯ ಕದಿರೇನಹಳ್ಳಿಯ ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ಹಸಿರಿನಿಂದ ಮೈ ತುಂಬಿಕೊಂಡಿದ್ದ ಗುಲ್ ಮೊಹರ್ ಮರದ ಬುಡಕ್ಕೆ ಡ್ರಿಲ್ ಮಾಡಿ, ಆಸಿಡ್ ಹಾಕಿದ ಘಟನೆ ನಡೆದಿದೆ.
ಇದನ್ನು ಗಮನಿಸಿದ ಪಾದಾಚಾರಿ ಒಬ್ಬರು ತಕ್ಷಣ ಬಿಬಿಎಂಪಿ ಹಾಗೂ ಪರಿಸರ ರಕ್ಷಕ ವಿಜಯ್ ನಿಶಾಂತ್ ಅವರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ವಿಜಯ್ ನಿಶಾಂತ್, ಮರಕ್ಕೆ ಹಾಕಿದ್ದ ಆಸಿಡ್ ಸ್ವಚ್ಛಗೊಳಿಸಿ, ಮರಕ್ಕೆ ಆಗಬಹುದಾದ ತೊಂದರೆಯನ್ನು ತಪ್ಪಿಸಿದ್ದಾರೆ.
ಇನ್ನೂ ವೈಟ್ ಸಿಮೆಂಟ್ನಿಂದ ಕೊರೆದ ರಂದ್ರವನ್ನು ಮುಚ್ಚಲಾಗಿದೆ. ಮರ ಕಡಿಯಲು ಸಾಧ್ಯವಾಗದೇ ಇರುವುದರಿಂದ ಈ ರೀತಿಯಾಗಿ ಮರವನ್ನು ನಾಶಗೊಳಿಸಲು, ಒಣಗಿಸುವ ಪ್ರಯತ್ನ ನಡೆಸಲಾಗಿದೆ. ಹೀಗಾಗಿ ರಸ್ತೆಗಳಲ್ಲಿ, ಮನೆ ಮುಂದೆ ಯಾರೇ ಮರವನ್ನು ಡ್ರಿಲ್ ಮಾಡುತ್ತಿದ್ದರೆ, ತಕ್ಷಣ ತಡೆದು, ಪಾಲಿಕೆ ಗಮನಕ್ಕೆ ತರಬೇಕೆಂದು ಪರಿಸರ ಹೋರಾಟಗಾರ ವಿಜಯ್ ನಿಶಾಂತ್ ಮನವಿ ಮಾಡಿದರು.