ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆ್ಯಸಿಡ್ ದಾಳಿ ಮಾಸುವ ಮುನ್ನವೇ ಸಾರಕ್ಕಿ ಸಿಗ್ನಲ್ ಬಳಿ ಇಂದು ಬೆಳಗ್ಗೆ ಮಹಿಳೆ ಮೇಲೆ ಆ್ಯಸಿಡ್ ಅಂಶವಿರುವ ಟಾಯ್ಲೆಟ್ ಕ್ಲೀನರ್ ಎರಚಿ ಪರಾರಿಯಾಗಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋರಿಪಾಳ್ಯ ನಿವಾಸಿ ಅಹಮ್ಮದ್ ಬಂಧಿತ ಆರೋಪಿ. ದಾಳಿಗೊಳಗಾದ ಸಂತ್ರಸ್ತೆಯನ್ನ ಸದ್ಯ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ರೆ ಪ್ರೀತಿಸುತ್ತಿದ್ದ ಆರೋಪಿ ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ. ಈ ವೇಳೆ ಮದುವೆಯಾಗಲು ಒಪ್ಪದಿದ್ದಾಗ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಈ ದಾಳಿಯಿಂದ ಮಹಿಳೆ ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಗಾಯಾಳು ಮಹಿಳೆಯನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಓದಿ: ಬೆಂಗಳೂರಲ್ಲಿ ಮತ್ತೊಂದು ಆ್ಯಸಿಡ್ ದಾಳಿ.. ಮಗುವಿದ್ದ ಮಹಿಳೆಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ ಲವರ್ನಿಂದ ಕೃತ್ಯ
ಆರೋಪಿ ಮತ್ತು ನೊಂದ ಮಹಿಳೆ ಇಬ್ಬರು ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂತ್ರಸ್ತ ಮಹಿಳೆಗೆ ಮದುವೆಯಾಗಿ ಮಗುವಿದೆ. ಹೀಗಿದ್ದರೂ ಆರೋಪಿ ಮಹಿಳೆಯನ್ನು ಪ್ರೀತಿಸುತ್ತಿದ್ದ. ಜೊತೆಗೆ ಮದುವೆ ಆಗುವಂತೆ ಪೀಡಿಸುತ್ತಿದ್ದ. ಗೋರಿಪಾಳ್ಯದ ನಿವಾಸಿಯಾಗಿರುವ ಆರೋಪಿ ಅಹ್ಮದ್, ಮಹಿಳೆ ಕೆಎಸ್ ಲೇಔಟ್ನಿಂದ ಜೆಪಿ ನಗರ ಕಡೆಗೆ ತೆರಳುತಿದ್ದಾಗ ಈ ಕೃತ್ಯ ಎಸಗಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಗೃಹ ಸಚಿವ ಪ್ರತಿಕ್ರಿಯೆ: ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಆ್ಯಸಿಡ್ ಎರಚಿದ ಪ್ರಕರಣವನ್ನು ಮೀಡಿಯಾದಲ್ಲಿ ನೋಡಿದ್ದೇನೆ. ಅಧಿಕಾರಿಗಳ ಬಳಿ ವರದಿ ಕೇಳಿದ್ದೇನೆ. ಆ್ಯಸಿಡ್ ಹಾಕಿದವನ ಮೇಲೆ ಕ್ರಮ ಆಗುತ್ತದೆ. ಆ್ಯಸಿಡ್ ಹಾಕುವುದು ಅಮಾನವೀಯ ಕೃತ್ಯ. ಇದನ್ನ ಬಹಳ ಗಂಭೀರವಾಗಿ ಪರಿಗಣಿಸಬೇಕು. ಆ್ಯಸಿಡ್ ಬ್ಯಾನ್ ಆಗಿದೆ ಅಂತಾ ತಿಳಿಯುತ್ತಿಲ್ಲ. ಅದರ ಬಗ್ಗೆ ಮಾಹಿತಿ ತಗೋತ್ತೀನಿ. ಅದರ ಕಾಯ್ದೆ ಏನಿದೆ ಪರಿಶೀಲಿಸ್ತೇನೆ. ಬ್ಯಾನ್ ಮಾಡಬಹುದಾ ಅಂತ ನೋಡ್ತೀನಿ ಎಂದರು.