ಬೆಂಗಳೂರು: ವೇಗವಾಗಿ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕರ್ತವ್ಯ ನಿರತ ಮಹಿಳಾ ಪಿಎಸ್ಐ ಮೇಲೆ ದರ್ಪ ಪ್ರದರ್ಶಿಸಿದ್ದ ವ್ಯಕ್ತಿಯನ್ನು ಗೋವಿಂದರಾಜನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜನಗರ ನಿವಾಸಿ ಭರತ್ ಬಂಧಿತ ಆರೋಪಿ. ಮಂಗಳವಾರ ಸುಬ್ಬಣ್ಣ ಗಾರ್ಡನ್ ಬಳಿ ಗಸ್ತಿನಲ್ಲಿದ್ದ ಪ್ರೊಬೆಷನರಿ ಪಿಎಸ್ಐ ಅಶ್ವಿನಿ ಹಿಪ್ಪರಗಿ ಅವರ ದ್ವಿಚಕ್ರ ವಾಹನಕ್ಕೆ ತನ್ನ ಬೈಕ್ ಡಿಕ್ಕಿ ಹೊಡೆದು ಆರೋಪಿ ದರ್ಪ ತೋರಿದ್ದ.
ಸುಬ್ಬಣ್ಣ ಗಾರ್ಡನ್ ರಸ್ತೆಯಲ್ಲಿ ತನ್ನ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಬರುತ್ತಿದ್ದ ಆರೋಪಿಯನ್ನು ತಡೆದಿದ್ದ ಪಿಎಸ್ಐ ಅಶ್ವಿನಿ, ನಿಧಾನವಾಗಿ ಚಲಿಸುವಂತೆ ಬುದ್ಧಿವಾದ ಹೇಳಿದ್ದರು. ಅಷ್ಟಕ್ಕೇ ಸಿಟ್ಟಿಗೆದ್ದ ಆರೋಪಿ ಪಿಎಸ್ಐ ಅಶ್ವಿನಿ ಅವರಿಗೆ ನಿಂದಿಸಿದ್ದು, ಮಾತ್ರವಲ್ಲದೇ ಅವರ ದ್ವಿಚಕ್ರ ವಾಹನವನ್ನು ಹಿಂಬಾಲಿಸಿಕೊಂಡು ಬಂದು ತನ್ನ ಬೈಕಿನಿಂದ ಡಿಕ್ಕಿ ಹೊಡೆದಿದ್ದ. ಅಷ್ಟೇ ಅಲ್ಲ ಲೇಡಿ ಪಿಎಸ್ಐಗೆ ಧಮ್ಕಿ ಹಾಕಿ ಎಸ್ಕೇಪ್ ಆಗಿದ್ದ.
ಬೈಕ್ ಡಿಕ್ಕಿಯಾದ ರಭಸಕ್ಕೆ ರಸ್ತೆ ಮೇಲೆ ಬಿದ್ದಿದ್ದ ಪಿಎಸ್ಐ ಅಶ್ವಿನಿ ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ತಕ್ಷಣ ಎಚ್ಚೆತ್ತ ಗೋವಿಂದರಾಜನಗರ ಠಾಣಾ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆ ಬದಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಪೊಲೀಸ್ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ಬೈಕ್ ಡಿಕ್ಕಿ ಮಾಡಿ ಗಾಯಗೊಳಿಸಿದ ಹಿನ್ನೆಲೆಯಲ್ಲಿ ಆತನ ಮೇಲೆ ರೌಡಿಶೀಟ್ ತೆರೆಯಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅರಣ್ಯಾಧಿಕಾರಿಗೆ ನಿಂದನೆ ಆರೋಪ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ