ಬೆಂಗಳೂರು: ಕೆಲಸ ಕೊಡಿಸುವುದಾಗಿ ಬೆಂಗಳೂರಿಗೆ ಕರೆತಂದು ಅಪ್ರಾಪ್ತೆ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಕಾಮುಕನಿಗೆ ಸೆಷನ್ಸ್ ಕೋರ್ಟ್ 20 ವರ್ಷ ಕಾರಾಗೃಹ ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ದಂಡ ವಿಧಿಸಿದೆ. ನಾಗಮಂಗಲ ತಾಲೂಕು ಬೆಳ್ಳೂರು ಹೋಬಳಿಯ ಕರಿಜೀರನಹಳ್ಳಿ ನಿವಾಸಿ ಮಂಜುನಾಥ್ ಶಿಕ್ಷೆಗೊಳಗಾದ ವ್ಯಕ್ತಿ.
ತನ್ನ ಗ್ರಾಮದ ಅಪ್ರಾಪ್ತೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿಗೆ ಕರೆತಂದು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಹನುಮಂತನಗರ ಠಾಣೆ ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಮಂಜುನಾಥ್ನನ್ನು ಬಂಧಿಸಿ, ಆರೋಪಪಟ್ಟಿ ಸಲ್ಲಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ತ್ವರಿತ ನ್ಯಾಯಾಲಯ ಅಪರಾಧಿ ಮಂಜುನಾಥ್ಗೆ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಸಂತ್ರಸ್ತೆಗೆ ಆರೋಪಿ ಬೆಂಗಳೂರಿನಲ್ಲಿ ಕೆಲಸ ಕೊಡಿಸುತ್ತೇನೆ ಎಂದು 2017ರಲ್ಲಿ ಕರೆತಂದಿದ್ದ. ಬಳಿಕ ತಾನು ಕಾರು ಚಾಲಕನಾಗಿರುವ ಮನೆಯಲ್ಲಿಯೇ ಮನೆಗೆಲಸಕ್ಕೆ ಸೇರಿಸಿದ್ದ. ವಾರಾಂತ್ಯದಲ್ಲಿ ಶ್ರೀನಗರದಲ್ಲಿರುವ ತನ್ನ ಅಕ್ಕನ ಮನೆಗೆ ಕರೆದೊಯ್ದು ಕಾಫಿಯಲ್ಲಿ ಮತ್ತು ಬರುವ ಔಷಧಿ ಹಾಕಿ ಅತ್ಯಾಚಾರ ಎಸಗಿದ್ದ. ಅದರಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದಳು.
ಈ ಸಂಬಂಧ ಸಂತ್ರಸ್ತೆಯು ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಳು. ಈ ಸಂಬಂಧ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಈ ಆಧಾರದ ಮೇಲೆ ಕೋರ್ಟ್ ಅಪರಾಧಿಗೆ ಶಿಕ್ಷೆ ಮತ್ತು ದಂಡ ವಿಧಿಸಿದೆ. ಸರ್ಕಾರಿ ಅಭಿಯೋಜಕರಾಗಿ ಗೀತಾ ರಾಮಕೃಷ್ಣ ಗೊರವರ ವಾದ ಮಂಡಿಸಿದ್ದರು.
ಓದಿ: ಅಣಶಿ ಘಟ್ಟದಲ್ಲಿ ಮತ್ತೆ ಕುಸಿದ ಭೂಮಿ: ಎಚ್ಚರಿಕೆ ಬೆನ್ನಲ್ಲೇ ಶುರುವಾದ ಆತಂಕ