ಬೆಂಗಳೂರು: ಕುಡಿದ ಅಮಲಿನಲ್ಲಿ ಪೋಷಕರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಕ್ಕೆ ಸ್ನೇಹಿತನನ್ನು ಕೊಲೆ ಮಾಡಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಜಿತೇಂದ್ರ ಕೊಲೆಯಾದ ಯುವಕ, ಜಾರ್ಖಂಡ್ ಮೂಲದ ಬಾಬು ಲಾಲ್ ಸಿಂಗ್ ಬಂಧಿತ ಆರೋಪಿ.
ಈ ಕುರಿತು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಮಾತನಾಡಿ, "ಜಿತೇಂದ್ರ ಮತ್ತು ಬಾಬು ಲಾಲ್ ಸಿಂಗ್ ಇಬ್ಬರು ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಜಿತೇಂದ್ರ, ಬಾಬು ಲಾಲ್ ಸಿಂಗ್ನ ಪೋಷಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಇದರಿಂದ ಕೋಪಗೊಂಡ ಬಾಬು ಲಾಲ್ ಸಿಂಗ್, ಜಿತೇಂದ್ರನನ್ನು ಸ್ಕಾರ್ಫ್ನಿಂದ ಕತ್ತು ಬಿಗಿದು ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಬಾಬು ಲಾಲ್ ಸಿಂಗ್ನನ್ನು ಬಂಧಿಸಿದ್ದೇವೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದೇವೆ" ಎಂದರು.
"ಈ ಕೊಲೆ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆ ಮತ್ತು ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಇಬ್ಬರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು" ಎಂದು ತಿಳಿಸಿದರು.
ಇದನ್ನೂ ಓದಿ: ಮಗ ಮಾಡಿದ್ದ 700 ರೂಪಾಯಿ ಸಾಲಕ್ಕೆ ತಂದೆ ಕೊಲೆ: ಅಪರಾಧಿಗಳಿಗೆ 9 ವರ್ಷ ಜೈಲು ಸಜೆ
ಅಣ್ಣನಿಂದ ತಮ್ಮನ ಹತ್ಯೆ(ಹುಬ್ಬಳ್ಳಿ): ಒಡಹುಟ್ಟಿದ ಅಣ್ಣನೇ ತಮ್ಮನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ಇತ್ತೀಚಿಗೆ ನಡೆದಿತ್ತು. ಮೃತ ವ್ಯಕ್ತಿಯನ್ನು ಪವನ್ ಕಟವಾಟೆ (30) ಎಂದು ಗುರುತಿಸಲಾಗಿದೆ. ರಾಜು ಕೊಲೆ ಮಾಡಿದ ಆರೋಪಿ. ಪವನ್ ಮನೆ ಬಿಟ್ಟು ಹುಬ್ಬಳ್ಳಿಯ ವಿಜಯನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ. ಹೀಗಿದ್ದರೂ ಮದ್ಯ ಸೇವಿಸಿ ಅಣ್ಣನ ಜೊತೆ ಜಗಳವಾಡುತ್ತಿದ್ದ. ಡಿಸೆಂಬರ್ 20 ರ ಬುಧವಾರ ಪವನ್ ಅಣ್ಣನ ಮನೆಗೆ ಬಂದು ಕ್ಯಾತೆ ತೆಗೆದಿದ್ದ. ಇದರಿಂದ ಕೋಪಗೊಂಡ ರಾಜು, ಪವನ್ ಮನೆಗೆ ಬಂದು ಮಲಗಿದ್ದಾಗ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಪರಾರಿಯಾಗಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಚಾಕುವಿನಿಂದ ಇರಿದು ಪತ್ನಿ ಕೊಲೆ ಮಾಡಿದ ಪತಿ(ಹಾವೇರಿ): ಇತ್ತೀಚಿಗೆ, ಚಾಕುವಿನಿಂದ ಇರಿದು ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹೂಲಿಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಪವಿತ್ರಾ ಹಳ್ಳೇರ (22) ಕೊಲೆಯಾದ ಮಹಿಳೆ. ರೇವಣ್ಣೆಪ್ಪ ಹಳ್ಳೇರ ಕೊಲೆಗೈದ ಆರೋಪಿ ಪತಿ.