ಬೆಂಗಳೂರು: ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಸಮೀಪದಲ್ಲಿಯೇ ಯುವತಿಯ ಬಟ್ಟೆ ಎಳೆದಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. 500 ಸಿಸಿಟಿವಿ ದೃಶ್ಯಗಳ ಪರಿಶೀಲನೆಯ ಬಳಿಕ ಬಿನ್ನಿಪೇಟೆ ನಿವಾಸಿ ಹರೀಶ್ (22) ಎಂಬಾತ ಸೆರೆ ಸಿಕ್ಕಿದ್ದಾನೆ.
ನವೆಂಬರ್ 6ರಂದು ಘಟನೆ ನಡೆದಿತ್ತು. ಕೂಡ್ಲು ಗೇಟ್ ಸಮೀಪ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿ ರಾತ್ರಿ 10.40ರ ಸುಮಾರಿಗೆ ಕನಕಪುರ ಮುಖ್ಯ ರಸ್ತೆಯ ಕಡೆ ಇರುವ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಯುವತಿಯನ್ನು ಹಿಂಬಾಲಿಸಿದ್ದ ಆರೋಪಿ ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಮುಂಭಾಗ ಬಟ್ಟೆ ಎಳೆದಾಡಿ, ಅಶ್ಲೀಲವಾಗಿ ನಿಂದಿಸಿದ್ದನು.
ನಂತರ ಕನಕಪುರ ಮುಖ್ಯರಸ್ತೆಯ ಸರ್ಕಲ್ ಬಳಿ ತನ್ನ ದ್ವಿಚಕ್ರ ವಾಹನವನ್ನು ಯೂಟರ್ನ್ ಮಾಡಿಕೊಂಡು ತೆರಳಿದ್ದ ಎಂದು ಯುವತಿ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಜಯನಗರ ಪೊಲೀಸರು, ಘಟನೆ ಮರೆತು ಮನೆಯಲ್ಲಿ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸರಣಿ ದರೋಡೆ: ನವೆಂಬರ್ 21ರ ರಾತ್ರಿ ಆರ್.ಟಿ.ನಗರ ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಗಳಿಗೆ ನುಗ್ಗಿದ ಸುಲಿಗೆಕೋರರು ಮಾರಕಾಸ್ತ್ರ ತೋರಿಸಿ, ಬೆದರಿಸಿ ಸರಣಿ ಸುಲಿಗೆ ಮಾಡಿದ್ದರು. ದಿನ್ನೂರು ಮುಖ್ಯರಸ್ತೆಯಲ್ಲಿ ನೇಚರ್ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ನುಗ್ಗಿ 40 ಸಾವಿರ ರೂಪಾಯಿ ದೋಚಿದ್ದರು.
ಬಳಿಕ ಅದೇ ದಾರಿಯಲ್ಲಿ ಬರುತ್ತಿದ್ದಂತೆ ಬಿಡಾ ಅಂಗಡಿ ಮಾಲೀಕನಿಗೆ ಹಣ ನೀಡುವಂತೆ ಬೆದರಿಸಿದ್ದರು. ಇದಕ್ಕೆ ನಿರಾಕರಿಸಿದ್ದ ಆತನ ಮೇಲೆ ಹಲ್ಲೆ ಮಾಡಿದ್ದರು. ಇನ್ನೊಂದೆಡೆ ಟೀ ಇಲ್ಲ ಅಂದಿದ್ದಕ್ಕೂ ಅಂಗಡಿ ಗಾಜು ಪುಡಿಗಟ್ಟಿದ್ದರು. ಆರೋಪಿಗಳು ಪುಂಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಡಿ.ಜೆ.ಹಳ್ಳಿಯ ರೌಡಿ ಇಮ್ರಾನ್ ಹಾಗೂ ಆತನ ಸಹಚರರು ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ಶಿವಮೊಗ್ಗ: ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಬಿಸಿ ಎಣ್ಣೆ ಸುರಿದು ಕುಡುಕನ ಕಿರಿಕ್