ಬೆಂಗಳೂರು : ಮದ್ಯ ಕುಡಿದ ನಶೆಯಲ್ಲಿ ಪೊಲೀಸರಿಗೆ ಬೈದು, ವಾಹನ ಜಖಂಗೊಳಿಸಿ ಪರಾರಿಯಾಗಿದ್ದ ಘಾನಾ ದೇಶದ ಪ್ರಜೆಯನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ನಗರದ ಚಿಕ್ಕ ಬಾಣಸವಾಡಿಯಲ್ಲಿ ವಾಸವಿದ್ದ ಮಾರ್ಗನ್ ಬಂಧಿತ ವಿದೇಶಿ ಪ್ರಜೆ.
ಜೂ.25 ರಂದು ರಾತ್ರಿ ವಾರಾಣಸಿ ಎನ್ಕ್ಲೇವ್ ಬಳಿ ನಾಲ್ವರು ವಿದೇಶಿಯರು ಜಗಳ ಮಾಡಿಕೊಂಡು ಕಿರುಚಾಡುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರು ಪ್ರಶ್ನಿಸಿ ಗಲಾಟೆ ಬಿಡಿಸಿ ಮನೆಗೆ ಹೋಗುವಂತೆ ತಾಕೀತು ಮಾಡಿದ್ದರು. ಈ ವೇಳೆ ಮೂವರು ಪೊಲೀಸರೊಂದಿಗೆ ಕ್ಷಮೆ ಕೇಳಿ ಮನೆಗೆ ಹೋಗಿದ್ದರು. ಆದರೆ, ಮಾರ್ಗನ್ ಮಾತ್ರ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದ.
ಓದಿ : ಲಂಚ ಪಡೆದ ಆರೋಪ : IRS officer ಬಂಧಿಸಿದ ಎಸಿಬಿ..!
ನನ್ನನ್ನು ಪ್ರಶ್ನೆ ಮಾಡಲು ನೀವು ಯಾರು? ಐ ವಿಲ್ ಕಿಲ್ ಯೂ ಎಂದು ಪೊಲೀಸರಿಗೆ ನಿಂದಿಸಿ, ಧಮ್ಕಿ ಹಾಕಿ ಕಾರಿನಲ್ಲಿ ತೆರಳಿದ್ದ. ಕೆಲ ಹೊತ್ತಿನ ಬಳಿಕ ಮತ್ತೆ ಬಂದ ಆತ, ಪೊಲೀಸರ ಚೀತಾ ವಾಹನಕ್ಕೆ ಡಿಕ್ಕಿ ಹೊಡೆದು ಜಖಂಗೊಳಿಸಿ ಪರಾರಿಯಾಗಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೆ.ಆರ್ ಪುರ ಸಬ್ ಇನ್ಸ್ಪೆಕ್ಟರ್ ನೇತೃತ್ವದ ತಂಡ, ದೆಹಲಿ ಹಾಗೂ ಉತ್ತರ ಪ್ರದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಕರೆ ತಂದಿದ್ದಾರೆ. ಆರೋಪಿಯಿಂದ ಕಾರು ಜಪ್ತಿ ಮಾಡಲಾಗಿದೆ.