ಬೆಂಗಳೂರು: ಇಲ್ಲಿನ ಹನುಮಂತನಗರ ಪೊಲೀಸರು ವನ್ಯಜೀವಿ ಕಾಯ್ದೆಯಡಿ ಮೂರು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ಈ ಪ್ರಕರಣಗಳಲ್ಲಿ ಒಟ್ಟು ಐವರ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಚಿರತೆ ಚರ್ಮ ಮಾರಾಟ: ಚಿರತೆಯ ಚರ್ಮ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಮುಳಬಾಗಿಲು ಮೂಲದ ಮುನೀರ್ ಬಾಷಾ, ಹೊಸಕೋಟೆ ಮೂಲದ ಶ್ರೀನಿವಾಸ್ ರಾವ್ ಹಾಗು ಬಳ್ಳಾರಿ ಮೂಲದ ಸೈಯದ್ ಅಕ್ಬರ್ ಎಂಬ ಆರೋಪಿಗಳಿಂದ ಒಂದು ಇಡಿ ಚಿರತೆಯ ಚರ್ಮ ವಶಕ್ಕೆ ಪಡೆಯಲಾಗಿದೆ.
ಎರಡನೇ ಪ್ರಕರಣ: ಹನುಮಂತನಗರ ಪೊಲೀಸರು ದಿನೇಶ್ ಎಂಬಾತನನ್ನು ಬಂಧಿಸಿ ಆನೆ ದಂತದಿಂದ ಮಾಡಿದ ಆನೆಯ ಮೂರ್ತಿ ಹಾಗೂ ಬಾಲಕೃಷ್ಣನ ಪುಟ್ಟ ವಿಗ್ರಹ ವಶಕ್ಕೆ ಪಡೆದಿದ್ದಾರೆ. ಠಾಣಾ ವ್ಯಾಪ್ತಿಯ ಜ್ಞಾನೇಶ್ವರಿ ಜ್ಯುವೆಲ್ಲರಿ ಶಾಪ್ ಬಳಿ ವಿಗ್ರಹಗಳ ಜೊತೆ ಹುಲಿಯ ಉಗುರುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಮುಂದಾಗಿದ್ದ ವೇಳೆ ಆರೋಪಿ ದಿನೇಶ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ನೀರು ಕೇಳುವ ನೆಪದಲ್ಲಿ ದರೋಡೆ: ಮೂವರ ಬಂಧನ
ಮೂರನೇ ಪ್ರಕರಣ: ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ತಮಿಳುನಾಡಿನ ಕೃಷ್ಣಗಿರಿ ನಿವಾಸಿ ಕಾಳಿಯಪ್ಪನ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಎರಡು ಆನೆ ದಂತಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹನುಮಂತನಗರದ ಕಲಾಸೌಧದ ಬಳಿ ದ್ವಿಚಕ್ರವಾಹನದಲ್ಲಿ ಆನೆದಂತಗಳನ್ನಿಟ್ಟುಕೊಂಡು ಮಾರಲು ಯತ್ನಿಸಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿ ಕಾಳಿಯಪ್ಪನ್ ಸಿಕ್ಕಿಬಿದ್ದಿದ್ದಾನೆ.
ಒಟ್ಟಾರೆ, ಐವರ ವಿರುದ್ಧ ಹನುಮಂತನಗರ ಪೊಲೀಸರು ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಹುಲಿ ಚರ್ಮ ಮಾರಾಟ ಮಾಡಲು ಯತ್ನಿಸಿದ ನಾಲ್ವರ ಬಂಧನ