ಬೆಂಗಳೂರು: ಒಂಟಿ ಮಹಿಳೆಯರು, ವೃದ್ಧ ದಂಪತಿ ವಾಸವಾಗಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಬುಡುಬುಡಿಕೆ ವೇಷಧಾರಿ ಸೋಗಿನಲ್ಲಿ ಪೂಜೆ ನೆಪದಲ್ಲಿ ಚಿನ್ನಾಭರಣ ದೋಚುತ್ತಿದ್ದ ಖದೀಮನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಹೆಗ್ಗನಹಳ್ಳಿ ಕ್ರಾಸ್ ನಿವಾಸಿ ಆನಂದ ಅಲಿಯಾಸ್ ಬುಡುಬುಡಿಕೆ ಕೃಷ್ಣಪ್ಪ ಬಂಧಿತ ಆರೋಪಿ.
ಈತ ಇತ್ತೀಚೆಗೆ ಜ್ಞಾನಭಾರತಿಯ ಕೆಪಿಎಸ್‌ಸಿ ಲೇಔಟ್ ನಿವಾಸಿ ಕೇಂದ್ರ ಸರ್ಕಾರದ ನಿವೃತ್ತ ನೌಕರ ವರದರಾಜು ಅವರ ಪತ್ನಿ ಬಳಿ ಪೂಜೆ ನೆಪದಲ್ಲಿ ವಂಚಿಸಿದ್ದ ಎನ್ನಲಾಗಿದೆ. ವರದರಾಜು ಅವರ ತಂದೆ ಇತ್ತೀಚೆಗೆ ನಿಧನರಾಗಿದ್ದರು. ಆ.13ರಂದು ಮುಂಜಾನೆ ಆರೋಪಿ ಅವರ ಮನೆ ಬಾಗಿಲ ಬಳಿ ಬುಡುಬುಡಿಕೆ ಸಾರಿಕೊಂಡು ಹೋಗಿದ್ದನು. ಈಗಾಗಲೇ ಈ ಮನೆಯಲ್ಲಿ ಒಂದು ಸಾವು ಆಗಿದೆ. ಮತ್ತೆ ಮೂರು ಸಾವು ಆಗುತ್ತವೆ ಎಂದು ಹೇಳಿದ್ದನಂತೆ.
ಅದೇ ದಿನ ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆ ಬಳಿ ಬಂದ ಆರೋಪಿ, ವರದರಾಜು ಪತ್ನಿಗೆ ಮತ್ತೆ ಈ ಮನೆಯಲ್ಲಿ ಸಾವು ಸಂಭವಿಸದಿರಲು ಸ್ಮಶಾನದಲ್ಲಿ ಮೈಮೇಲಿನ ಚಿನ್ನಾಭರಣ ಇಟ್ಟು ಪೂಜೆ ಮಾಡಬೇಕು ಎಂದಿದ್ದನಂತೆ. ಅದರಂತೆ ವರದರಾಜು ಅವರ ಪತ್ನಿ ಹಣೆಗೆ ಕಪ್ಪು ಬಟ್ಟನ್ನು ಇಟ್ಟು ಆತ ಹೇಳಿದಂತೆ ಕೇಳುವಂತೆ ಮಾಡಿದ್ದಾನೆ ಎನ್ನಲಾಗಿದೆ.
ಬಳಿಕ ಪೂಜೆ ಮಾಡಬೇಕೆಂದು, ಅವರ ಮೈಮೇಲಿದ್ದ 2 ಲಕ್ಷ ರೂ. ಮೌಲ್ಯದ 2 ಚಿನ್ನದ ಸರ, 1 ಉಂಗುರ ಹಾಗೂ 5 ಸಾವಿರ ರೂ. ನಗದು ಪಡೆದುಕೊಂಡು ಪೂಜೆ ಮುಗಿದ ಬಳಿಕ ಚಿನ್ನಾಭರಣ ವಾಪಸ್ ತಂದು ಕೊಡುತ್ತೇನೆ ಎಂದು ಮೊಬೈಲ್ ನಂಬರ್ ಕೊಟ್ಟು ಹೋಗಿದ್ದನಂತೆ.ಆದರೆ, ಆರೋಪಿ ಒಂದು ತಿಂಗಳಾದರೂ ಫೋನ್ ರಿಸೀವ್ ಮಾಡಿಲ್ಲ. ಇದರಿಂದ ಅನುಮಾನಗೊಂಡ ವರದರಾಜು ಮನೆಯವರು ದೂರು ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಡಬ: ಅಪ್ರಾಪ್ತ ಸೊಸೆಯನ್ನೆ ಗರ್ಭಿಣಿಯನ್ನಾಗಿಸಿ ಜೈಲು ಸೇರಿದ ಮಾವ