ಬೆಂಗಳೂರು : ಕ್ಷುಲ್ಲಕ ಕಾರಣಗಳಿಂದ ನಗರದಲ್ಲಿ ಕೊಲೆ, ಮಾರಣಾಂತಿಕ ಹಲ್ಲೆ ನಡೆಯುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿದೆ. ಇದೇ ರೀತಿ ಇಲ್ಲೋರ್ವ ಕಿರಾತಕ ಅಂಗಡಿಯವನು ಇಯರ್ ಫೋನ್ ಇಲ್ಲ ಎಂದು ಹೇಳಿದ ಕಾರಣಕ್ಕೆ ಮಚ್ಚು ತೋರಿಸಿ ಬೆದರಿಸಿ ಅಂಗಡಿ ಮಾಲೀಕನಿಂದ ಸುಲಿಗೆ ಮಾಡಿ ಪರಾರಿಯಾಗಿದ್ದು, ಈ ಖತರ್ನಾಕ್ ಸುಲಿಗೆಕೋರನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ಆರೋಪಿ ತೌಸೀಫ್ ಪಾಷಾನನ್ನು ಬಂಧಿಸಲಾಗಿದೆ. ಡಿ.25ರ ರಾತ್ರಿ ಗಾಂಧಿ ನಗರದಲ್ಲಿರುವ ಹಾಕಾಂಗ್ ಬಜಾರ್ಗೆ ಹೋಗಿದ್ದ ಈತ, ಮೊಬೈಲ್ ಅಂಗಡಿಯೊಂದರಲ್ಲಿ ಸ್ಯಾಮ್‌ಸ್ಯಾಂಗ್ ಕಂಪನಿಯ ಇಯರ್ ಫೋನ್ ನೀಡುವಂತೆ ಕೇಳಿದ್ದಾನೆ.
ಸ್ಟಾಕ್ ಇಲ್ಲ ಎಂದು ಅಂಗಡಿ ಮಾಲೀಕ ಉತ್ತರಿಸುತ್ತಿದ್ದಂತೆ ಮಚ್ಚು ತೋರಿಸಿ, ಬೆದರಿಸಿ ದಾಂಧಲೆ ನಡೆಸಿದ್ದಾನೆ. ನಂತರ ಮಾಲೀಕನ ಬಳಿಯಿದ್ದ ಬ್ಲೂ ಟೂತ್ ಕಸಿದು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ತೌಸೀಫ್ ಪಾಷಾನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಈತ ಸರ, ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಈತನ ಸಹಚರರೊಂದಿಗೆ ಸೇರಿಕೊಂಡು ಕೆ ಪಿ ಅಗ್ರಹಾರ, ಬ್ಯಾಟರಾಯನಪುರ, ಆರ್‌ಆರ್‌ನಗರ, ಉಪ್ಪಾರಪೇಟೆ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತನಿಂದ ಅಂದಾಜು ₹15 ಲಕ್ಷ ಮೌಲ್ಯದ 255 ಗ್ರಾಂ ಚಿನ್ನ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ. ತೌಸೀಫ್ ಪಾಷಾ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಒಂಟಿ ಮನೆ ಹಾಗೂ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.