ಬೆಂಗಳೂರು : 'ನಮ್ಮ ಮೆಟ್ರೋ'ದಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಭದ್ರತಾ ಸಿಬ್ಬಂದಿ ಹಿಡಿದು ಉಪ್ಪಾರಪೇಟೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಲೋಕೇಶ್ ಆಚಾರ್ ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ 9.40ರ ಸುಮಾರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ್ದ 22 ವರ್ಷದ ಯುವತಿಯ ಮೈಕೈ ಮುಟ್ಟಿ ಆರೋಪಿ ಕಿರುಕುಳ ನೀಡಿದ್ದಾನೆ. ಯುವತಿ ಕೂಗುತ್ತಿದ್ದಂತೆ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಲು ಆರೋಪಿ ಯತ್ನಿಸಿದ್ದು, ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಳಿಕ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಲೋಕೇಶ್ ಆಗಿದ್ದು, ಈ ಹಿಂದೆ ಕೂಡ ಬಿಎಂಟಿಸಿ ಬಸ್ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದ ಎಂಬುದು ಪೊಲೀಸರ ತನಿಖೆಯ ವೇಳೆ ಬಯಲಾಗಿದೆ. ಆರೋಪಿತನಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಮೆಟ್ರೋದಲ್ಲಿ ವರದಿಯಾದ ಇತ್ತೀಚಿನ ಅಪರಾಧ ಪ್ರಕರಣಗಳು: ಮೆಟ್ರೋ ನಿಲ್ದಾಣದಲ್ಲಿ ಕಿಡಿಗೇಡಿಯೊಬ್ಬ ಕಾಲೇಜು ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ನವೆಂಬರ್ 20 ರಂದು ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆದರೆ, ಘಟನೆ ಕುರಿತು ಯಾವುದೇ ದೂರು ದಾಖಲಾಗಿರಲಿಲ್ಲ. ಹಾಗೇ ನಗರದ ಕಾಲೇಜೊಂದರ 20 ವರ್ಷದ ವಿದ್ಯಾರ್ಥಿನಿಗೆ ಮೆಟ್ರೋದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಮತ್ತೊಂದು ಪ್ರಕರಣ ಸೆಪ್ಟೆಂಬರ್ 9ರಂದು ವರದಿಯಾಗಿತ್ತು.
ಹಿಂದಿನ ಪ್ರಕರಣಗಳು: - ಪ್ರವಾಸದ ವೇಳೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಪ್ರವಾಸಕ್ಕೆ ತೆರಳಿದ್ದಾಗ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಮೈಸೂರಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಹಾಗೂ ಸಿಬ್ಬಂದಿ ವಿರುದ್ಧ ಸಾರ್ವಜನಿಕ ಶಿಕ್ಷಣದ ಉಪ ನಿರ್ದೇಶಕರಿಗೆ ದೂರು ನೀಡಲಾಗಿದೆ. ಪ್ರೌಢಶಾಲೆಯ 52 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಂಬರ್ 20 ರಿಂದ 25 ರವರೆಗೆ ಬೇಲೂರು, ಹಳೆಬೀಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಾರ್ಕಳ, ಶೃಂಗೇರಿ, ಮುರುಡೇಶ್ವರ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸ ತೆರಳಿದ್ದ ವೇಳೆ ಘಟನೆ ನಡೆದಿದೆ. ಈ ವಿಚಾರವನ್ನು ಶಿಕ್ಷಕಿಯರಲ್ಲಿ ನೊಂದ ವಿದ್ಯಾರ್ಥಿನಿಯರು ಹೇಳಿಕೊಂಡಿದ್ದರು. ಇದರಿಂದ ಶಿಕ್ಷಕಿಯರೇ ತಮ್ಮ ಶಾಲೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಪೋಷಕರಿಗೆ ವಿಚಾರ ತಿಳಿಸಿ ಅವರು ಶಾಲೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದಾಗ ಮುಖ್ಯ ಶಿಕ್ಷಕ ಪರಾರಿಯಾಗಿದ್ದು ಅಲ್ಲಿದ್ದ ಸಿಬ್ಬಂದಿ ಮಾಡಿದ ತಪ್ಪು ಒಪ್ಪಿಕೊಂಡಿದ್ದಾನೆ. ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಡಿಪಿಐ ಭರವಸೆ ನೀಡಿದ್ದಾರೆ.