ಬೆಂಗಳೂರು: ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಿಎಸ್ಎಫ್ ಕ್ಯಾಂಪಸ್ ಉದ್ಯೋಗಿ ಹಾಗೂ ಯೂಟ್ಯೂಬರ್ ಸಾವನ್ನಪ್ಪಿದ ಘಟನೆ ತಡರಾತ್ರಿ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಎಸ್ಎಫ್ ಕ್ಯಾಂಪಸ್ ಮುಂಭಾಗದ ರಸ್ತೆಯಲ್ಲಿ ನಡೆದಿದೆ. ಬಿಎಸ್ಎಫ್ ಕ್ಯಾಂಪಸ್ ಉದ್ಯೋಗಿ ಸುಧಾಕರ್ ಹಾಗೂ ಯೂಟ್ಯೂಬರ್ ಗಣಿ ಮೃತಪಟ್ಟಿದ್ದಾರೆ.
ವಾಹನಗಳ ಸುರಕ್ಷತೆ, ಕ್ಷಮತೆ, ಸಂಚಾರ ನಿಯಮಗಳ ಕುರಿತು ವ್ಲಾಗ್ ಮಾಡುತ್ತಿದ್ದ ಗಣಿ, ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿದ್ದರು. ತಡರಾತ್ರಿ 11.45ರ ಸುಮಾರಿಗೆ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ವೇಗವಾಗಿ ಬರುತ್ತಿದ್ದರು. ಬಿಎಸ್ಎಫ್ ಕ್ಯಾಂಪಸ್ನಿಂದ ಬೈಕ್‌ನಲ್ಲಿ ಹೊರಬರುತ್ತಿದ್ದ ಸುಧಾಕರ್ಗೆ ಗಣಿ ಓಡಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸುಧಾಕರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಣಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರೂ ಕೂಡ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಯಲ್ಲಾಪುರ: ಕಾರ್ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವು- ಭಯಾನಕ ದೃಶ್ಯ!
ಇಬ್ಬರೂ ಸಹ ಹೆಲ್ಮೆಟ್ ಧರಿಸದೇ ಇದ್ದಿದ್ದು ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ- ಪೈಂಟರ್ ಸಾವು: ಅಕ್ಟೋಬರ್ 14ರ ಶನಿವಾರ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಬಿಹಾರಿ ಮೂಲದ ಬೊಮ್ಮನಹಳ್ಳಿಯಲ್ಲಿ ನಿವಾಸಿ ರಾಜು ಮೃತಪಟ್ಟಿದ್ದರು. ರಾಜು ಪೇಂಟರ್ ಕೆಲಸ ಮಾಡುತ್ತಿದ್ದು, ಶನಿವಾರ ಸಂಜೆ ಸ್ನೇಹಿತನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮನೆಗೆ ಹೋಗುತ್ತಿದ್ದರು. ಮಾರ್ಗಮಧ್ಯೆೆ ಹೊಸೂರು ರಸ್ತೆೆಯ ಸರ್ವೀಸ್ ರೋಡ್ ಬಳಿ ಅತಿ ವೇಗವಾಗಿ ಬಂದ ಕಾರು ಇವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿ: ಇತ್ತೀಚೆಗೆ ಹುಬ್ಬಳ್ಳಿ ಕೇಶ್ವಾಪುರ ಸರ್ಕಲ್ ಜೈನ್ ದೇವಸ್ಥಾನದ ಮುಂದೆ ರಸ್ತೆ ದಾಟುತ್ತಿದ್ದ ಮಹಿಳೆಗೆ ವೇಗವಾಗಿ ಬಂದು ಬೈಕ್ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಜೋಶನಾ ಜೈನ್ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದರು. ಪೂರ್ವ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದರು. ಆದಿತ್ಯ ಮಲ್ಲಿಕಾರ್ಜುನ ಮತ್ತಿಕೊಪ್ಪ ಮಹಿಳೆಗೆ ಡಿಕ್ಕಿ ಹೊಡೆದ ಬೈಕ್ ಸವಾರನಾಗಿದ್ದು, ಬೈಕ್ ಹಿಂಬದಿಯಲ್ಲಿ ಓರ್ವ ಸವಾರ ಕುಳಿತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ಚಿಕ್ಕಬಳ್ಳಾಪುರ ರಸ್ತೆ ಅಪಘಾತ: ಮೃತರ ಸಂಖ್ಯೆ 13ಕ್ಕೆ ಏರಿಕೆ.. 2 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ