ಬೆಂಗಳೂರು: ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ವಿಜಯನಗರ ಸಂಚಾರ ಠಾಣಾ ವ್ಯಾಪ್ತಿಯ ಗೋವಿಂದರಾಜ ನಗರದ ಬಳಿ ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ಸವಾರ ಕುಮಾರ್ (45) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪತ್ನಿಯ ಸೀಮಂತ ಸಂಭ್ರಮದಲ್ಲಿದ್ದ ಕುಮಾರ್: ಅನ್ನಪೂರ್ಣೇಶ್ವರಿ ನಗರ ನಿವಾಸಿಯಾಗಿದ್ದ ಕುಮಾರ್, ಇಂದು ಪತ್ನಿಯ ಸೀಮಂತ ಕಾರ್ಯವಿದ್ದ ಕಾರಣ ವಿಜಯನಗರ ಮಾರ್ಕೆಟ್ನಿಂದ ಹೂವು, ಹಣ್ಣು ಖರೀದಿಸಿಕೊಂಡು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಗೋವಿಂದರಾಜ ನಗರದ ಬೈ ಟು ಕಾಫಿ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ನೆಲಕ್ಕೆ ಬಿದ್ದ ಕುಮಾರ್ಗೆ ತಲೆಗೆ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವಿಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಂಟಿಸಿ ಬಸ್ ಡಿಕ್ಕಿ, ಮಹಿಳೆ ಸಾವು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಿಗ್ಗೆ ಹುಳಿಮಾವು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾರ್ಮೆಂಟ್ಸ್ ಉದ್ಯೋಗಿ ವೀಣಾ ಮೃತರು. ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿಯಾಗಿದೆ. ಸ್ಥಳಕ್ಕೆ ಹುಳಿಮಾವು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ: ದುರ್ಗಾ ಪೂಜೆ ಮುಗಿಸಿ ಬರುತ್ತಿದ್ದ ನಾಲ್ವರ ಸಾವು
ಸರ್ಕಾರಿ ಬಸ್-ಟಾಟಾ ಸುಮೋ ಡಿಕ್ಕಿ: ಕೆಲವು ದಿನಗಳ ಹಿಂದೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಆರು ಜನ ಮೃತಪಟ್ಟಿದ್ದರು. ಸರ್ಕಾರಿ ಬಸ್ ಹಾಗೂ ಟಾಟಾ ಸುಮೋ ನಡುವೆ ಸಂಭವಿಸಿದ ಅವಘಡದಲ್ಲಿ ಸಾವಿಗೀಡಾದವರಲ್ಲಿ ಓರ್ವ ಬಾಲಕನೂ ಸೇರಿದ್ದು, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಹೊರವಲಯದಲ್ಲಿ ದುರಂತ ಸಂಭವಿಸಿತ್ತು.
ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿ ಸಾವು: ಅಕ್ಟೋಬರ್ 14ರಂದು ಬಿಎಂಟಿಸಿ ಬಸ್ ಹರಿದು ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಶವಂತಪುರದ ಗಾರೆಪ್ಪನಪಾಳ್ಯ ರಸ್ತೆಯ ಹೂವಿನ ಮಾರ್ಕೆಟ್ ಬಳಿ ನಡೆದಿತ್ತು. ಗಂಗಾಧರ್ (21) ಮೃತ ವಿದ್ಯಾರ್ಥಿ.
ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗಂಗಾಧರ್ ಹೆಚ್ಎಎಲ್ನಲ್ಲಿ ಇಂಟರ್ನ್ಶಿಪ್ಗೆಂದು ಕಾಲೇಜಿನಿಂದ ಸರ್ಟಿಫಿಕೇಟ್ ತರಲು ಬೈಕ್ನಲ್ಲಿ ತೆರಳುತ್ತಿದ್ದನು. ಈ ಸಂದರ್ಭದಲ್ಲಿ ಹಿಂಬದಿಯಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿತ್ತು. ರಸ್ತೆಗೆಸೆಯಲ್ಪಟ್ಟ ಗಂಗಾಧರ್ ಮೇಲೆ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದನು.
ಇದನ್ನೂ ಓದಿ: ಲಕ್ಷ್ಮಿ ಪೂಜೆ, ಹೂವು ತುಂಬುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಸಿಮೆಂಟ್ ಲಾರಿ.. ಆರು ಜನರ ದಾರುಣ ಸಾವು