ಬೆಂಗಳೂರು : ಜಯನಗರ ಸಂಚಾರಿ ಪೊಲೀಸ್ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಟೋಯಿಂಗ್ ಮಾಡಿ ವಾಹನ ಬಿಡಲು ಲಂಚ ಕೇಳುತ್ತಿದ್ದ ಪೊಲೀಸರನ್ನು ವಿಚಾರಣೆಗೊಳಪಡಿಸಿದ್ದಾರೆ.
ದ್ವಿಚಕ್ರ ವಾಹನವನ್ನು ಬಿಡಲು 800 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಮಲ್ಲೇಶ್ವರಂ ನಿವಾಸಿಯೊಬ್ಬರು ಕೊಟ್ಟ ದೂರಿನನ್ವಯ ದಾಳಿ ನಡೆಸಲಾಗಿದೆ. ಮಲ್ಲೇಶ್ವರಂ ನಿವಾಸಿಯೊಬ್ಬರು ಜೆಪಿನಗರದ ಶಾಂತಿ ಸಾಗರ ಮುಂಭಾಗ ಬೈಕ್ ನಿಲ್ಲಿಸಿದ್ದರು.
ಈ ವೇಳೆ ಅವರ ದ್ವಿಚಕ್ರ ವಾಹನವನ್ನು ಸಂಚಾರಿ ಪೊಲೀಸರು ಟೋಯಿಂಗ್ ಮಾಡಿದ್ದರು. ನಂತರ ಠಾಣೆಗೆ ಹೋಗಿ ವಿಚಾರಿಸಿದಾಗ 800 ರೂ. ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಟೋಯಿಂಗ್ನ ಸರ್ಕಾರಿ ಶುಲ್ಕ 1150 ರೂಪಾಯಿಗಳು ಇದ್ದು, ಇವರು 800 ರೂಪಾಯಿ ಹೆಚ್ಚುವರಿಯಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ 3 ಗಂಟೆ ಸುಮಾರಿಗೆ ಠಾಣೆಯ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು, ಠಾಣೆಯ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ.