ಬೆಂಗಳೂರು: ಸರ್ಕಾರಿ ಕೆಲಸದಲ್ಲಿದ್ದುಕೊಂಡು ಅಕ್ರಮವಾಗಿ ಹಣ ಗಳಿಸಿದ ಆರೋಪದ ಮೇಲೆ ಕೆಲ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ.
ಸತೀಶ್ ಕುಮಾರ್, ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ: ವಾಣಿಜ್ಯ ತೆರಿಗೆ ಕಚೇರಿಯ ಹೆಚ್ಚುವರಿ ಆಯುಕ್ತರಾಗಿದ್ದು, ಇವರು ಮೈಸೂರು ನಗರದ ಟಿ.ಕೆ ಲೇಔಟ್ ಬಳಿ ಮನೆ ಹೊಂದಿದ್ದಾರೆ. ಡಾಲರ್ಸ್ ಕಾಲೋನಿ ಬಳಿ ಮನೆ ಬಾಡಿಗೆಗೆ ನೀಡಿದ್ದಾರೆ ಎನ್ನಲಾಗಿದ್ದು, ಇಲ್ಲೆಲ್ಲಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಮಕೃಷ್ಣ, ಅರಣ್ಯಾಧಿಕಾರಿ, ಶ್ರೀನಿವಾಸಪುರ, ಕೋಲಾರ ಜಿಲ್ಲೆ: ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಬಂಗಾರಪೇಟೆ, ವಿಜಯನಗರ ಬಳಿ ಮನೆ ಹಾಗೂ ಸ್ನೇಹಿತರ ಹೆಸರಿನಲ್ಲಿ ಆಸ್ತಿ ಮಾಡಿರುವ ಆರೋಪವಿದೆ. ಹೀಗಾಗಿ ಅಧಿಕಾರಿಯ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಶ್ರೀಗೋಪಾ ಶೆಟ್ಟಿ, ಕಾರ್ಯನಿರ್ವಾಹಕ ಅಭಿಯಂತರ, ರಾಯಚೂರು ಜಿಲ್ಲೆ: ರಾಯಚೂರಲ್ಲಿ ಪತ್ನಿ ಹೆಸರಲ್ಲಿ ಪೆಟ್ರೋಲ್ ಬಂಕ್ ಹಾಗೂ ರಾಜ್ಯ ಹೆದ್ದಾರಿ ಬಳಿ ಟ್ರ್ಯಾಕ್ಟರ್ ಶೋ ರೂಮ್ ಹೊಂದಿದ್ದಾರೆ ಎನ್ನಲಾಗಿದ್ದು, ಇವರ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ.
ರಾಘಪ್ಪ ಲಾಲಪ್ಪ ಲಮಾಣಿ, ಸಹಾಯಕ ಅಭಿಯಂತರ, ಬಾಗಲಕೋಟೆ: ಬಾಗಲಕೋಟೆ ನಗರದ ವಿದ್ಯಾಗಿರಿ 8ನೇ ಕ್ರಾಸ್ ಬಳಿ ಮನೆ ಹಾಗೂ ಸಹೋದರನ ಮಾಲಿಕತ್ವದಲ್ಲಿ ವ್ಯವಹಾರ ಹೊಂದಿದ್ದಾರೆ ಎನ್ನಲಾಗಿದ್ದು, ಇವರ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಲಾಗಿದೆ.
ಎಸಿಬಿ ಅಧಿಕಾರಿಗಳು ಸದ್ಯ ನಾಲ್ಕು ಅಧಿಕಾರಿಗಳಿಗೆ ಸಂಬಂಧಿಸಿದ ಸುಮಾರು 14 ಸ್ಥಳಗಳಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಾಳಿ ಮುಂದುವರೆದಿದೆ.