ಬೆಂಗಳೂರು: ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಕೆಎಎಸ್ ಅಧಿಕಾರಿ ಸುಧಾ ಅಕ್ರಮ ಆಸ್ತಿ ವಿಚಾರ ಸಂಬಂಧ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಇತ್ತ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಕಳೆದ ಒಂದು ವಾರದಿಂದ ಸುಧಾ ಮತ್ತು ಕುಟುಂಬಸ್ಥರ ಆಸ್ತಿ, ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಎಸಿಬಿ, ಅವರ ಆಸ್ತಿಯ ವಿವರಕ್ಕೆ ಸಂಬಂಧಿಸಿದ 200 ಕ್ಕೂ ಹೆಚ್ಚು ದಾಖಲೆಗಳನ್ನು ಈಗಾಗಲೇ ಜಪ್ತಿ ಮಾಡಿದೆ. ಆದರೆ, ಎಲ್ಲ ಮಾಹಿತಿಗಳನ್ನು ಸಂಗ್ರಹ ಮಾಡಲು ಇನ್ನೂ ಸ್ವಲ್ಪ ಸಮಾಯವಾಕಾಶ ಬೇಕಾಗಬಹುದು ಎಂದು ತಿಳಿಸಿದೆ. ಇನ್ನೊಂದೆಡೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸುಧಾ ಬಿಡಿಎ ಅಧಿಕಾರಿಯಾಗಿದ್ದಾಗ ಅವರ ಖಾತೆಗೆ ಬಹಳಷ್ಟು ಹಣ ಜಮಾವಣೆಯಾಗಿದ್ದು, ಇದರ ಬಗ್ಗೆ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಸದ್ಯ ಸುಧಾ ಅವರನ್ನು ಎಸಿಬಿ ತನಿಖೆ ನಡೆಸುತ್ತಿದ್ದು, ತದನಂತರ ಅವರು ಜಪ್ತಿಮಾಡಿದ ದಾಖಲಾತಿಗಳನ್ನು ಆದಾಯ ಇಲಾಖೆ ಹಾಗೂ ಇಡಿಗೆ ಮಾಹಿತಿ ನೀಡಲಿದೆ.
ಡಾ. ಬಿ. ಸುಧಾ ಅವರು ಭ್ರಷ್ಟಾಚಾರ, ಅವ್ಯಹಾರಗಳಲ್ಲಿ ಭಾಗಿಯಾದ ಸಂಬಂಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಏಳನೇ ತಾರೀಖಿನಂದು ಬೆಂಗಳೂರು, ಮೈಸೂರು ಹಾಗೂ ಉಡುಪಿ ಜಿಲ್ಲೆಯ ಒಟ್ಟು 7 ಸ್ಥಳಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ, ಹಲವಾರು ಅಕ್ರಮ ಆಸ್ತಿಗಳು ಪತ್ತೆಯಾಗಿದ್ದು, ಸದ್ಯ ಲೆಕ್ಕಾಚಾರ ಮುಂದುವರಿದಿದೆ.