ಬೆಂಗಳೂರು: ಪ್ರವಾಹ ಪೀಡಿತ ಜಿಲ್ಲೆಗಳ ಸರ್ಕಾರಿ ಮತ್ತು ಖಾಸಗಿ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಮೂಲಭೂತ ಸೌಲಭ್ಯಗಳ ಸುಧಾರಣೆಗೆ ಉಸ್ತುವಾರಿ ಸಮಿತಿಯನ್ನು ರಚಿಸುವ ಸಂಬಂಧ ಪಿಯು ಇಲಾಖೆ ಸುತ್ತೋಲೆ ಹೊರಡಿಸಿದೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪ್ರಸ್ತುತ ತೀವ್ರವಾಗಿ ಮಳೆ ಸುರಿದ ಪರಿಣಾಮ ಸಾರ್ವಜನಿಕ ಆಸ್ತಿ-ಪಾಸ್ತಿ ಹಾಗೂ ಇತ್ಯಾದಿಗಳಿಗೆ ಹಾನಿ ಉಂಟಾಗಿದೆ. ಅದರಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಹಾಗೂ ಖಾಸಗಿ ಪದವಿಪೂರ್ವ ಕಾಲೇಜುಗಳ ಕಟ್ಟಡಗಳಿಗೆ ಹಾನಿಯಾಗಿದ್ದು, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಿದೆ.
ಹೀಗಾಗಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪದವಿಪೂರ್ವ ಕಾಲೇಜುಗಳ ಮೂಲಭೂತ ಸೌಲಭ್ಯಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಸುಧಾರಣೆಗಾಗಿ ಇಲಾಖೆಯು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕ್ರಮಗಳ ಅನುಷ್ಠಾನದ ಮತ್ತು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಉಸ್ತುವಾರಿ ನೋಡಿಕೊಳ್ಳಲು ಮತ್ತು ಇಲಾಖೆಗೆ ಆಗಿಂದಾಗ್ಗೆ ಮಾಹಿತಿಯನ್ನು ಒದಗಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳ ಐದು ಜನ ಪ್ರಾಂಶುಪಾಲರುಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ಸೂಚಿಸಿದೆ. ಜೊತೆಗೆ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರ ನೀಡಲಾಗಿದೆ.