ಬೆಂಗಳೂರು: ಕೇಂದ್ರದ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಯೋಜನೆ ಹೆಸರಿನಲ್ಲಿ ಕೆಲ ಸ್ವಯಂಸೇವಾ ಸಂಸ್ಥೆಗಳು ಕೊಳೆಗೇರಿಗಳಲ್ಲಿ ಶಿಕ್ಷಣ ಮತ್ತು ಆರೋಗ್ಯದ ಅರಿವು ಮೂಡಿಸುತ್ತೇವೆ ಎಂದು ವರ್ಷಕ್ಕೆ ಐದು ಕೋಟಿ ರೂ.ಬಿಲ್ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಐಇಸಿ ಯೋಜನೆಯಡಿ ಏಳೆಂಟು ಸಂಸ್ಥೆಗಳು ಕೊಳಗೇರಿ ಬಡವರ ಮನ ಪರಿವರ್ತನೆ ಎಂಬ ಹೆಸರಲ್ಲಿ ವಾರ್ಷಿಕ ಸುಮಾರು ಐದು ಕೋಟಿ ರೂ. ಬಿಲ್ ಮಾಡಿ ಹಣ ದುರುಪಯೋಗ ಮಾಡುತ್ತಿರುವ ಪ್ರಕರಣ ಬಯಲಾಗಿದೆ ಎಂದರು. ಈ ಸಂಸ್ಥೆಗಳು ವಾರ್ಷಿಕ ಐದಾರು ಕೋಟಿ ರೂ. ಬಿಲ್ ಮಾಡಿ ಹಣ ಪಡೆಯುತ್ತಿವೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಅವ್ಯವಹಾರದ ಮಾಹಿತಿ ಸಿಕ್ಕ ಮೇಲೆ ಪರಿಶೀಲನೆ ನಡೆಸಿದಾಗ ಈ ಹಣ ದುರುಪಯೋಗದ ಸತ್ಯ ಬಯಲಾಗಿದೆ. ಇದರಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೆ, ಇದರ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ಈ ಯೋಜನೆಯಡಿ 2018-19ರಲ್ಲಿ 2 ಕೋಟಿ ರೂ. 2019-20ರಲ್ಲಿ ₹1.50 ಕೋಟಿ ಹೀಗೆ ಒಟ್ಟು ಮೂರುವರೆ ಕೋಟಿ ರೂ. ಬಂದಿದೆ. ಸಾಧನಾ ಸಂಸ್ಥೆ ಸೇರಿ ಕೆಲ ಎನ್‌ಜಿಒ ಸಂಸ್ಥೆಗಳು ಕೊಳಗೇರಿ ನಿವಾಸಿಗಳಿಗೆ ಐಎಎಸ್ ಹಾಗೂ ಕೆಎಎಸ್ ತರಬೇತಿ ನೀಡ್ತೇವೆ ಅಂತಾ ಹಣ ಪಡೆಯುತ್ತಿದ್ದರು. ಸದ್ಯ ಹಣ ಬಿಡುಗಡೆಯನ್ನು ತಡೆ ಹಿಡಿಯಲಾಗಿದೆ ಎಂದು ತಿಳಿಸಿದರು. ಪರಿಶೀಲನೆ ನಡೆಸಿದಾಗ ಈ ಸಂಸ್ಥೆಗಳಲ್ಲಿ ಯಾವ ಯೋಜನೆಯೂ ಇಲ್ಲ, ಅರಿವೂ ಇಲ್ಲ. ಈ ಎಲ್ಲಾ ಭೋಗಸ್ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ವಸತಿ ಯೋಜನೆಗಳಿಗೆ ಆಧಾರ್, ಬಿಪಿಎಲ್ ಕಾರ್ಡ್ ಕಡ್ಡಾಯ: ರಾಜ್ಯದ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಆಧಾರ್ ಕಾರ್ಡ್ ಜೊತೆಗೆ ಬಿಪಿಎಲ್ ಕಾರ್ಡ್ ಸಲ್ಲಿಕೆ ಕಡ್ಡಾಯ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. ನಾನು ವಸತಿ ಸಚಿವನಾದ ಮೇಲೆ ಬಡವರಿಗೆ ವಸತಿ ಕಲ್ಪಿಸುವ ಯೋಜನೆಯಡಿ 49,691 ಮನೆಗಳ ಪೈಕಿ 27,489 ಮನೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 26193 ಮನೆಗಳು ಮಾತ್ರ ಅರ್ಹರಾಗಿದ್ದಾರೆ. 1296 ಫಲಾನುಭವಿಗಳು ಅನರ್ಹರು ಎಂದು ವರದಿ ನೀಡಿದ್ದಾರೆ. ಹಾಗಾಗಿ 8514 ಕುಟುಂಬಗಳಿಗೆ 40 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ನಮ್ಮ ಮೇಲೆ ಆರೋಪ ಮಾಡಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಿಗೆ ನಮ್ಮ ಅಧಿಕಾರಿಗಳು ಕೊಟ್ಟಿರುವ ವರದಿ ಪುಸ್ತಕ ರೂಪದಲ್ಲಿ ಸಿದ್ಧಪಡಿಸಿ ಕಳುಹಿಸುತ್ತೇವೆ. ಇನ್ನು ಮುಂದೆ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಜಾಗೃತ ದಳ ರಚನೆ ಮಾಡುವ ಉದ್ದೇಶವಿದೆ ಎಂದು ಇದೇ ವೇಳೆ ತಿಳಿಸಿದರು. ರಾಜ್ಯದಲ್ಲಿ ಒಟ್ಟು 4 .40ಲಕ್ಷ ಮನೆಗಳನ್ನು ಸಿದ್ಧಪಡಿಸಲಾಗಿದೆ. ಅವುಗಳಿಗೆ 3,000 ಕೋಟಿ ರೂ.ಹಣ ಬಿಡುಗಡೆ ಮಾಡಬೇಕಾಗಿದೆ. ಜೂನ್ 30ರೊಳಗಾಗಿ ಎಲ್ಲಾ ಮನೆಗಳ ಅರ್ಹ ಫಲಾನುಭವಿಗಳ ಸಮೀಕ್ಷೆ ಮುಗಿಸಿ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಗ್ರಾಮೀಣ ಭಾಗದಲ್ಲಿ ಒಂದೇ ನಿವೇಶನದಲ್ಲಿ ನಿರ್ಮಾಣವಾದ ಮನೆಯನ್ನು ನಾಲ್ಕು ಆ್ಯಂಗಲ್‌ನಲ್ಲಿ ಪ್ರತ್ಯೇಕ ಫೋಟೋಗಳನ್ನು ತೆಗೆದು ನಾಲ್ಕು ಬಾರಿ ಸಹಾಯಧನ ಪಡೆದಿರುವ ದೂರುಗಳೂ ಸಾಕಷ್ಟಿವೆ. ಹಾಗಾಗಿಯೇ ಅಂಬೇಡ್ಕರ್, ಬಸವ,ರಾಜೀವ್,ವಾಜಪೇಯಿ ಆವಾಸ್,ದೇವರಾಜ ಅರಸು,ಪ್ರಧಾನಮಂತ್ರಿ ವಸತಿ ಯೋಜನೆಗಳಿವೆ. ಇವನ್ನೆಲ್ಲವನ್ನೂ ಒಂದುಗೂಡಿಸಿ ಒಂದೇ ವಸತಿ ಯೋಜನೆಯಾಗಿ ರೂಪಿಸುವ ಚಿಂತನೆಯೂ ಇದೆ ಎಂದು ತಿಳಿಸಿದರು.
ಒಂದೇ ಒಂದು ಮನೆ ನಿರ್ಮಿಸಿಲ್ಲ: ಸಿದ್ದರಾಮಯ್ಯ ಕಾಲದಲ್ಲಿ ಬೆಂಗಳೂರಿನಲ್ಲಿ ಒಂದು ಲಕ್ಷ ವಸತಿ ನಿರ್ಮಾಣ ಮಾಡುವುದಾಗಿ ಘೋಷಿಸಿ ಭೂಮಿಪೂಜೆಯನ್ನೂ ಮಾಡಿದ್ದರು. ಈವರೆಗೆ ಆ ಯೋಜನೆಯಡಿ ಒಂದೇ ಒಂದು ಮನೆ ಕಟ್ಟಿಲ್ಲ. ಈಗ ಆ ಯೋಜನೆಗೆ ಬೆಂಗಳೂರು ಹೊರವಲಯದಲ್ಲಿ ಭೂಮಿ ಗುರುತಿಸಲಾಗುತ್ತಿದೆ. ಜ.30ರೊಳಗೆ ಆರು ಪ್ಯಾಕೇಜ್ನಲ್ಲಿ ಟೆಂಡರ್ ಕರೆದು, ಮನೆ ಕಟ್ಟುವ ಕಾರ್ಯ ಪ್ರಾರಂಭಿಸಲಾಗುವುದು. 2020ರೊಳಗೆ ಸುಮಾರು 40,000 ಮನೆ ಕಟ್ಟಲು ಚಿಂತನೆ ಇದೆ. ಬಹುಮಹಡಿ ಕಟ್ಟಡ ಇನ್ನು ಮುಂದೆ ಕಟ್ಟುವುದಿಲ್ಲ. ಇನ್ನು ಮುಂದೆ ಜಿ+3 ಮಾತ್ರ ಇರಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಕೊಳಗೇರಿ ಮುಕ್ತ ನಗರ: ಬೆಂಗಳೂರಿನಲ್ಲಿ 300ಕ್ಕೂ ಹೆಚ್ಚು ಕೊಳಗೇರಿಗಳಿವೆ.150-200 ಕೊಳಗೇರಿಗಳನ್ನು ಗುರುತಿಸಿ, ಅವರಿಗೆ ಮೂಲಸೌಕರ್ಯ ಸಹಿತ ಮನೆಗಳನ್ನು ನಿರ್ಮಿಸಿಕೊಡಲು ಉದ್ದೇಶಿಸಿದ್ದೇವೆ ಎಂದು ತಿಳಿಸಿದರು. ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕನಿಷ್ಟ ಶೇ.70 ಭಾಗವಾದರೂ ಕೊಳಚೆ ಪ್ರದೇಶ ಮುಕ್ತವನ್ನಾಗಿ ಮಾಡಲು ಉದ್ದೇಶಿಸಿದ್ದೇವೆ ಎಂದು ತಿಳಿಸಿದರು.
ಡಾ.ಶಿವಕುಮಾರಸ್ವಾಮಿ ಸಂಸ್ಮರಣಾ ಕಾರ್ಯಕ್ರಮ: ಜ. 21ಕ್ಕೆ ಡಾ.ಶಿವಕುಮಾರಸ್ವಾಮಿಗಳು ಶಿವೈಕ್ಯರಾಗಿ ಒಂದು ವರ್ಷವಾಗುತ್ತದೆ. ಹಾಗಾಗಿ ಜನವರಿ 19ರಂದು ತುಮಕೂರಿನಲ್ಲಿ ಸ್ವಾಮಿಗಳ ಪ್ರಥಮ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿಎಂ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಜೆಎಸ್ಎಸ್ನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಮೊದಲಾದವರು ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.