ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಮೂರನೇ ಆರೋಪಿ ಹೊಸಪೇಟೆ ಸಂಸ್ಥಾನ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಇಂದು ನಗರದ 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಯನ್ನು ಸೆಪ್ಟೆಂಬರ್ 29ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿತು.
ಅಭಿನವ ಹಾಲಶ್ರಿ ಪರ ವಕೀಲ ಲೋಕೇಶ್ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಸರ್ಕಾರಿ ವಕೀಲರಿಗೆ ಸೆಪ್ಟೆಂಬರ್ 29ರಂದು ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡಿತು. ಹೀಗಾಗಿ, ಅಲ್ಲಿಯವರೆಗೂ ಆರೋಪಿಯನ್ನು ನ್ಯಾಯಾಲಯ ಪೊಲೀಸರ ವಶಕ್ಕೆ ಒಪ್ಪಿಸಿದೆ.
ನಿನ್ನೆಯಿಂದ ಸ್ಚಾಮೀಜಿಯನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಒಂದಿಷ್ಟು ಮಹತ್ವದ ವಿಚಾರಗಳನ್ನು ಅವರು ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆ 10:30ರ ವೇಳೆಗೆ ಸ್ವಾಮೀಜಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಚಂದ್ರಾ ಲೇಔಟ್ ಬಳಿಯ ಮನೆಯೊಂದರಲ್ಲಿ ಸ್ವಾಮೀಜಿ ಹಣ ಪಡೆದಿದ್ದಾರೆ ಎನ್ನಲಾಗಿದ್ದು, ಅಲ್ಲಿಗೆ ಕರೆದೊಯ್ದು ಸಿಸಿಬಿ ಅಧಿಕಾರಿಗಳು ಸ್ಥಳ ಮಹಜರು ಪ್ರಕ್ರಿಯೆ ಮಾಡಲಿದ್ದಾರೆ. ಪಡೆದ ಹಣವನ್ನು ಮೈಸೂರಿನಲ್ಲಿ ಇರಿಟ್ಟಿರುವ ಮಾಹಿತಿಯಿದ್ದು, ನಂತರ ಮೈಸೂರಿಗೂ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ 6 ಆರೋಪಿಗಳ ಬಂಧನವಾಗುತ್ತಿದ್ದಂತೆ ಅಭಿನವ ಹಾಲಶ್ರೀ ಸ್ವಾಮೀಜಿ ನಾಪತ್ತೆಯಾಗಿದ್ದರು. ತಲೆಮರೆಸಿಕೊಳ್ಳಲು ಸಂಚು ರೂಪಿಸಿದ್ದ ಆರೋಪಿ ಮೈಸೂರಿನಿಂದ ಒಡಿಶಾಗೆ ವಿವಿಧ ಮಾರ್ಗಗಳಲ್ಲಿ ತೆರಳಿ, ಭುವನೇಶ್ವರದಿಂದ ಭೋದ್ ಗಯಾಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಒಡಿಶಾ ಕಟಕ್ ಬಳಿ ಬಂಧಿಸಲಾಗಿದೆ.
ಉದ್ಯಮಿಗೆ ವಂಚಿಸಿದ ಆರೋಪದಡಿ ಚೈತ್ರಾ ಕುಂದಾಪುರ, ರಮೇಶ್, ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ಶ್ರೀಕಾಂತ್, ಧನರಾಜ್, ಹಾಗೂ ಪ್ರಜ್ವಲ್ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆತರುವ ವೇಳೆ, ಮಾಧ್ಯಮಗಳತ್ತ ನೋಟ ಬೀರಿದ ಚೈತ್ರಾ, "ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಎಲ್ಲಾ ಸತ್ಯ ಹೊರಗಡೆ ಬರಲಿದೆ. ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗಲಿದೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿಯಿದೆ. ಹಾಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ" ಎಂದು ಆರೋಪಿಸಿದ್ದರು.
ಇದೀಗ ಅಭಿನವ ಹಾಲಶ್ರೀ ಸ್ವಾಮೀಜಿಯ ಬಂಧನವಾಗಿದೆ. ನ್ಯಾಯಾಲಯ 9 ದಿನಗಳ ಕಾಲ ಹಾಲಶ್ರೀ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ಇದನ್ನೂ ಓದಿ: ಉದ್ಯಮಿಗೆ ವಂಚನೆ ಪ್ರಕರಣ ; ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನ