ಬೆಂಗಳೂರು: ನಗರದ ಆಮ್ ಆದ್ಮಿ ಪಕ್ಷದ ರಾಜ್ಯ ಕಚೇರಿ ಎದುರಿಗೆ ಪ್ರತಿಭಟನೆ ನೆಪದಲ್ಲಿ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಆಪ್ ಮುಖಂಡರು ಆರೋಪಿಸಿದ್ದಾರೆ. ಅಲ್ಲದೇ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸ್ಥಳ ಮತ್ತು ಕಚೇರಿಯನ್ನು ಗೋಮೂತ್ರ ಸಿಂಪಡಿಸಿ ಶುದ್ಧೀಕರಣಗೊಳಿಸಿದರು.
ಕಳೆದ ತಿಂಗಳು ಸಂಸದ ತೇಜಸ್ವಿಸೂರ್ಯ ನೇತೃತ್ವದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡಿದ ಮಾದರಿಯಲ್ಲೇ ಕರ್ನಾಟಕದ ಎಎಪಿ ಕಚೇರಿ ಮೇಲೂ ದಾಳಿ ಮಾಡಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದಾರೆ. ಕಚೇರಿ ಮುಂದಿದ್ದ ಬೈಕ್‌ಗಳನ್ನೆಲ್ಲ ಬೀಳಿಸಿದ್ದಲ್ಲದೇ, ಕಚೇರಿಯ ಒಳಗೆ ನುಗ್ಗಲು ಮುಂದಾಗಿದ್ದರು ಎಂದು ಆಪ್ನ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ದೂರಿದ್ದಾರೆ.
ಪ್ರಚೋದನಾಕಾರಿ ಭಾಷಣ ಮಾಡಿ, ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ ಬಿಜೆಪಿ ಮುಖಂಡ ತಜೀಂದರ್ ಪಾಲ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ದೇಶದಲ್ಲಿ ಶಾಂತಿ ಕದಡುವವರಿಗೆ ಕಾನೂನಿನ ಅನ್ವಯ ಶಿಕ್ಷೆಯಾಗಬೇಕು. ಬಿಜೆಪಿ ಕಾರ್ಯಕರ್ತರಿಗೆ ಎಎಪಿ ಕಚೇರಿ ಮೇಲೆ ದಾಳಿ ಮಾಡಲು ಬಗ್ಗಾರವರ ಬಂಧನ ಒಂದು ನೆಪ ಅಷ್ಟೇ. ರಾಜ್ಯದಲ್ಲಿ ಎಎಪಿಗೆ ಜನ ಬೆಂಬಲ ಹೆಚ್ಚಾಗುತ್ತಿರುವುದರಿಂದ ಬಿಜೆಪಿ ಹತಾಶವಾಗಿರುವುದೇ ಈ ದಾಳಿಗೆ ಪ್ರಮುಖ ಕಾರಣ ಎಂದರು.
ಇದನ್ನೂ ಓದಿ: ದ್ವೇಷಿಸುವುದಕ್ಕಲ್ಲ ಮನುಷ್ಯರ ಹಿತಕ್ಕಾಗಿ ಧರ್ಮ.. ಬಸವಣ್ಣ ಧರ್ಮಕ್ಕೆ ಸರಳ ವಿವರಣೆ ಕೊಟ್ಟಿದಾರೆ: ಸಿದ್ದರಾಮಯ್ಯ