ಬೆಂಗಳೂರು: ಲೋಕೋಪಯೋಗಿ ಇಲಾಖೆಯ 660 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ನಡೆದ ಸಂದರ್ಶನದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಕ್ರಮ ಎಸಗಿದೆ ಎಂದು ಆರೋಪಿಸಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿ, ಕೆಪಿಎಸ್‌ಸಿ ಕಚೇರಿ ಎದುರು ಏಕಾಂಗಿಯಾಗಿ ನಿಲ್ಲುವ ಮೂಲಕ ಆಮ್ ಆದ್ಮಿ ಪಾರ್ಟಿ(ಆಪ್) ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ ಗೌಡ ಪ್ರತಿಭಟನೆ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮುಕುಂದ ಗೌಡ, ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದಾಗಿ ಪ್ರಾಮಾಣಿಕ ಯುವಕರಿಗೆ ಅನ್ಯಾಯವಾಗುತ್ತಿದೆ. ಲೋಕೋಪಯೋಗಿ ಇಲಾಖೆಯ 660 ಎಇ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸಿದ ಸಂದರ್ಶನದ ಅಂಕ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. 400 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಕೇವಲ 83.50 ರಿಂದ 94 ಅಂಕ ಗಳಿಸಿದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆಯಲ್ಲಿ ಒಟ್ಟು 50ಕ್ಕೆ 40 ಅಂಕಗಳನ್ನು ನೀಡಲಾಗಿದೆ.
ಲಿಖಿತ ಪರೀಕ್ಷೆಯಲ್ಲಿ 69 ಅಂಕ ಗಳಿಸಿದ ಅಭ್ಯರ್ಥಿಗೆ ಸಂದರ್ಶನದಲ್ಲಿ 39 ಅಂಕ ಕೊಡಲಾಗಿದೆ. ಆದರೆ, 236 ಅಂಕ ಗಳಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಅಭ್ಯರ್ಥಿಗೆ ಸಂದರ್ಶನದಲ್ಲಿ ಕೇವಲ 13.25 ಅಂಕ ನೀಡಿದ್ದಾರೆ. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ರೀತಿ ಅಂಕ ನೀಡಲಾಗಿದ್ದು, ಇದನ್ನು ಗಮನಿಸಿದರೆ ಅಕ್ರಮ ನಡೆದಿರುವುದು ಸ್ಪಷ್ಟ ಎಂದು ಅವರು ಆರೋಪಿಸಿದರು.
ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಅಂಕವು ಸಂದರ್ಶನ ಮಂಡಳಿಯ ನಾಲ್ವರು ಸದಸ್ಯರು ನೀಡಿದ ಅಂಕಗಳ ಸರಾಸರಿ ಆಗಬೇಕು. ಹೀಗಿದ್ದರೂ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 25ರಷ್ಟು ಮಂದಿಗೆ ನಾಲ್ವರೂ ಒಂದೇ ಸಮನಾದ, ಅದೂ 40 ಅಂಕಗಳನ್ನು ನೀಡಿರುವುದು ಹೇಗೆ? ಅವರೆಲ್ಲರಿಗೂ ಈ 497 ಅಭ್ಯರ್ಥಿಗಳೂ ಅತ್ಯಂತ ಪ್ರತಿಭಾನ್ವಿತರು ಎಂದು ಅನಿಸಿದ್ದಲ್ಲಿ, ಕೆಲವರಿಗಾದರೂ 40ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿಬಹುದಿತ್ತಲ್ಲವೇ?, ಕೆಪಿಎಸ್‌ಸಿ ಮಾಡಿದ ಈ ಅಕ್ರಮದ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಿ, ಒಂದು ತಿಂಗಳೊಳಗೆ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
'ಹಣ ನೀಡಿದ ಅಭ್ಯರ್ಥಿಗಳಿಗೆ ಗರಿಷ್ಠ ಅಂಕ': ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಯಲ್ಲಿ ಹಣ ನೀಡಿದವರಿಗೆ ಗರಿಷ್ಠ ಹಾಗೂ ಉಳಿದವರಿಗೆ ಕನಿಷ್ಠ ಅಂಕಗಳನ್ನು ನೀಡಿ ಅನ್ಯಾಯ ಎಸಗಲಾಗಿದೆ. 40 ಅಂಕ ಪಡೆದ ಬಹುತೇಕ ಅಭ್ಯರ್ಥಿಗಳು 30 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ ಹಣ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಪಿಎಸ್‌ಸಿಯಲ್ಲಿನ ಸಾಲುಸಾಲು ಅಕ್ರಮಗಳಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆಗಳು ಗಗನಕುಸುಮವಾಗಿವೆ ಎಂದು ಮುಕುಂದ ಗೌಡ ಬೇಸರ ವ್ಯಕ್ತಪಡಿಸಿದರು.
''ನೂರಾರು ಪ್ರಾಮಾಣಿಕ ಯುವಕರಿಗೆ ಮತ್ತು ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಮತ್ತು ಅದನ್ನು ನಡೆಸುತ್ತಿರುವ ಈ ಸರ್ಕಾರ ಅನ್ಯಾಯ ಮಾಡಿದೆ. ಲೋಕೋಪಯೋಗಿ ಇಲಾಖೆಯ 660 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಯಲ್ಲಿ ಅರ್ಹತೆ ಇಲ್ಲದವರಿಗೆ ಹೆಚ್ಚು ಅಂಕ ನೀಡಿ ಪಾಸ್ ಮಾಡಿದ್ದಾರೆ. ಪ್ರಾಮಾಣಿಕ ಅಭ್ಯರ್ಥಿಗಳು ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಸಂದರ್ಶನದಲ್ಲಿ ಕಡಿಮೆ ಅಂಕ ನೀಡಿದ್ದಾರೆ. ಕನಸು ಹೊತ್ತುಕೊಂಡು ಬರುತ್ತಿರುವ ನೂರಾರು ಅಭ್ಯರ್ಥಿಗಳಿಗೆ ಈ ಮೂಲಕ ಅನ್ಯಾಯ ಮಾಡಲಾಗಿದೆ. ಇದನ್ನು ಪ್ರಶ್ನೆ ಮಾಡಬೇಕು. ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳ ಜೊತೆ ನಾವು ಇದ್ದೇವೆ''. ಮುಕುಂದ್ ಗೌಡ, ಆಮ್ ಆದ್ಮಿ ಪಾರ್ಟಿ ರಾಜ್ಯ ಯುವ ಘಟಕದ ಅಧ್ಯಕ್ಷ
ಇದನ್ನೂ ಓದಿ: ಪಾಪ ಮಾಡಿದ ಪಕ್ಷವನ್ನು ಸುಮ್ಮನೆ ಮನೆಗೆ ಹೋಗಲು ಬಿಡುವುದಿಲ್ಲ: ಸಿದ್ದರಾಮಯ್ಯ-ಡಿಕೆಶಿ ವಾಗ್ದಾನ