ಬೆಂಗಳೂರು: ಮೂವರು ಸಾರಿಗೆ ನೌಕಕರ ಆತ್ಮಹತ್ಯೆಯ ನೈತಿಕ ಹೊಣೆ ಹೊತ್ತು ರಾಜ್ಯ ಸಾರಿಗೆ ಸಚಿವ ಸ್ಥಾನಕ್ಕೆ ಶ್ರೀರಾಮುಲು ಅವರು ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಭಾಸ್ಕರ್ ರಾವ್ ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ಸಚಿವ ಶ್ರೀರಾಮುಲು ಅಧಿಕಾರಾವಧಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮ ಚಟುವಟಿಕೆಗಳು ಮಿತಿ ಮೀರಿವೆ. ಇಲಾಖೆಯ ಉನ್ನತ ಅಧಿಕಾರಿಗಳು ನೌಕರರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರವು ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೇ ಸಾರಿಗೆ ನೌಕರರನ್ನು ಶತ್ರುಗಳಂತೆ ಕಾಣುತ್ತಿದೆ.
ನೌಕರರ ಹಿತ ಕಾಪಾಡುವುದರಲ್ಲಿ ವಿಫಲರಾದ ಸಚಿವ ಶ್ರೀರಾಮುಲು ತಕ್ಷಣವೇ ರಾಜೀನಾಮೆ ನೀಡಿ, ಆ ಸ್ಥಾನಕ್ಕೆ ಸಮರ್ಥರು ನೇಮಕಗೊಂಡರೆ ಮಾತ್ರ ಇಲಾಖೆಯಲ್ಲಿನ ಸಾಲು ಸಾಲು ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳಿದರು. ಇದುವರೆಗೂ ಸಾರಿಗೆ ಇಲಾಖೆಯಲ್ಲಿ 30ಕ್ಕೂ ಹೆಚ್ಚು ನೌಕರರ ಆತ್ಮಹತ್ಯೆಗೆ ಕಾರಣರಾದ ಡಿಪೋ ಮ್ಯಾನೇಜರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಜಿಗಣಿ, ಬನಶಂಕರಿ ಹಾಗೂ ಚನ್ನಸಂದ್ರ ಡಿಪೋಗಳ ಮೂವರ ಆತ್ಮಹತ್ಯೆ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಶ್ರೀರಾಮುಲು ಮೌನ ತಾಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆತ್ಮಹತ್ಯೆ ಮಾಡಿಕೊಂಡ ನೌಕರರ ಕುಟುಂಬಗಳಿಗೆ ಪರಿಹಾರ ನೀಡುವ ಸೌಜನ್ಯವನ್ನೂ ಸರ್ಕಾರ ತೋರದಿರುವುದು ದುರಂತ, ಕೊರೋನಾ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು,ಅವರ ಕುಟುಂಬಕ್ಕೂ ಸಹ ಪರಿಹಾರ ನೀಡದ ಬೇಜವಾಬ್ದಾರಿ ಸರ್ಕಾರ ಎಂದರು.
ಪೊಲೀಸರಿಂದ ಕ್ರಮ ಕೈಗೊಳ್ಳಲು ಮೀನಮೇಷ: ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಮಾತನಾಡಿ, ಸಾರಿಗೆ ಇಲಾಖೆಯ ಪುನಶ್ಚೇತನ ಹಾಗೂ ನೌಕರರ ಹಿತ ಕಾಪಾಡಲು ವಿಫಲರಾಗಿರುವ ಶ್ರೀರಾಮುಲುಗೆ ಆ ಸ್ಥಾನದಲ್ಲಿ ಮುಂದುವರಿಯುವ ಯೋಗ್ಯತೆಯಿಲ್ಲ.
ಸಿಎಂ ಬಸವರಾಜ ಬೊಮ್ಮಾಯಿ ಕೂಡಲೇ ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಆತ್ಮಹತ್ಯೆ ಮಾಡಿಕೊಂಡ ನೌಕರ ಹೊಳೆ ಬಸಪ್ಪರವರು ಡಿಪೋ ಮ್ಯಾನೇಜರ್ ವಿರುದ್ಧ ಡೆತ್ ನೋಟ್ ಬರೆದಿಟ್ಟಿದ್ದರೂ ಪೊಲೀಸರು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ಮನೆಗೆ ಮುತ್ತಿಗೆ: ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ವಿನಾಕಾರಣ ಆಮ್ ಆದ್ಮಿ ಪಕ್ಷವನ್ನು ದೂಷಿಸುತ್ತಿರುವುದು ಅವರಿಗಿರುವ ನೌಕರರ ಮೇಲಿನ ನಿರ್ಲಕ್ಷ್ಯ, ಬೇಜವಾಬ್ದಾರಿ, ಮತ್ತು ಲಂಚಬಾಕತನಕ್ಕೆ ಸಾಕ್ಷಿ ಎಂದು ಸುರೇಶ್ ರಾಥೋಡ್ ಖಂಡಿಸಿದರು. ಸರ್ಕಾರ ಶೀಘ್ರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ಮನೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಸುರೇಶ್ ರಾಥೋಡ್ ಎಚ್ಚರಿಸಿದರು.ಈ ಸಂದರ್ಭ ಆಮ್ ಆದ್ಮಿ ಪಾರ್ಟಿ ಹಾಗೂ ಬಿಎಂಟಿಸಿ ನೌಕರರ ಸಂಘದ ಮುಖಂಡರಾಗಿರುವ ಆನಂದ್ ಉಪಸ್ಥಿತರಿದ್ದರು.
ಇದನ್ನೂ ಓದಿ: ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಹೇಳುವುದು ನಿಜಕ್ಕೂ ಸತ್ಯವೇ ಅಥವಾ ಚುನಾವಣಾ ಘೋಷವಾಕ್ಯವೇ?