ಬೆಂಗಳೂರು: ಬಿಎಂಪಿಯ ಕನ್ನಡ ಶಾಲೆಗೆ ಮಂಜೂರಾಗಿದ್ದ 20 ಕೋಟಿ ರೂ. ಮೌಲ್ಯದ ನಿವೇಶನವನ್ನು ಹೊಳಲ್ಕೆರೆಯ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಕಬಳಿಸಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ನಾಯಕರು ಲೋಕಾಯುಕ್ತರಿಗೆ ದೂರು ನೀಡಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಆಪ್ ರಾಜ್ಯ ವಕ್ತಾರ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಕೆ ಮಥಾಯಿ, ಕೆಂಗೇರಿ ಉಪ ನಗರದಲ್ಲಿರುವ ಸರ್. ಎಂ.ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನಲ್ಲಿ ಬಿಡಿಎಗೆ ಸೇರಿದ 25, 225 ಚದರ ಅಡಿ ವಿಸ್ತೀರ್ಣದ ಸಿಎ ನಿವೇಶನವನ್ನು 2010ರ ಫೆಬ್ರುವರಿ 2ರಂದು ಬಿಬಿಎಂಪಿಯ ಕನ್ನಡ ಶಾಲೆಗೆ ಹಂಚಿಕೆ ಮಾಡಿ, ಜುಲೈ 17ರಂದು ಶಾಲೆಗೆ ಹಂಚಿಕೆ ಪತ್ರ ನೀಡಲಾಗಿತ್ತು.
ಆದರೆ, ಅಲ್ಲಿ ಶಾಲೆ ನಿರ್ಮಿಸುವುದಾಗಿ ಹೇಳಿದ್ದ ಶಾಸಕ ಚಂದ್ರಪ್ಪ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಸಹಾಯದಿಂದ ನಿವೇಶನವನ್ನು ತಮ್ಮ ಹೆಸರಿಗೆ ಕಾನೂನುಗಳನ್ನು ಗಾಳಿಗೆ ತೂರಿ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ: ಖಾಸಗಿ ಸಹಭಾಗಿತ್ವಕ್ಕೆ ವಿರೋಧ, ಲೋಕಾಯುಕ್ತರಿಗೆ ದೂರು
ಈ ನಿವೇಶನಕ್ಕೆ ಮಾರುಕಟ್ಟೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಬೆಲೆಯಿದೆ. ಆದರೆ, 2021ರ ಡಿಸೆಂಬರ್ 27ರಂದು ಬಿಡಿಎಯು ಕೇವಲ 10 ಕೋಟಿ ರೂಪಾಯಿಗೆ ಚಂದ್ರಪ್ಪ ಅವರಿಗೆ ಮಾರಾಟ ಮಾಡಿ, ಶುದ್ಧ ಕ್ರಯಪತ್ರ ನೀಡಲು ನಿರ್ಣಯ ಕೈಗೊಂಡಿದೆ. 2022ರ ಏಪ್ರಿಲ್ 5ರಂದು ಚಂದ್ರಪ್ಪರವರು 1 ಕೋಟಿ ರೂಪಾಯಿ ಬಿಡಿಎಗೆ ಪಾವತಿಸಿದ್ದಾರೆ.
ಚಂದ್ರಪ್ಪರವರಿಗೆ ಸಿಎ ನಿವೇಶನ ಮಂಜೂರಾಗದೇ ಇದ್ದರೂ ಬದಲಿ ನಿವೇಶನ ನೀಡಲಾಗಿದೆ. ಕಳೆದ 11 ವರ್ಷಗಳಿಂದ ಚಂದ್ರಪ್ಪರವರು ಈ ನಿವೇಶನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದು, ಅಲ್ಲಿ ಸಿಮೆಂಟ್ ಇಟ್ಟಿಗೆ ತಯಾರಿಸಲಾಗುತ್ತಿದೆ ಎಂದು ಮಥಾಯಿ ದೂರಿದರು.
ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ: ಮತ್ತೊಬ್ಬ ಮುಖಂಡ ರಾಹುಲ್ ಧರ್ಮಸೇನಾ ಮಾತನಾಡಿ, ಬಿಜೆಪಿ ಶಾಸಕ ಚಂದ್ರಪ್ಪ ಈ ಹಗರಣದಿಂದಾಗಿ ಬಿಡಿಎ ಹಾಗೂ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಸರ್ಕಾರದ ಅಮೂಲ್ಯ ಸ್ವತ್ತು ಶಾಸಕರ ಪಾಲಾಗಿದೆ.
ಶಾಸಕರನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಶೀಘ್ರವೇ ಬಂಧಿಸಿ ವಿಚಾರಣೆ ನಡೆಸಬೇಕು. ಕನ್ನಡ ಶಾಲೆಯ ಸ್ವತ್ತಿನ ದುರ್ಬಳಕೆಗೆ ಅವಕಾಶ ನೀಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧವೂ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್