ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಎದುರಿನ ಪಂಪ ಮಹಾಕವಿ ಮಾರ್ಗದ ಹೆಸರು ಬದಲಾವಣೆ ಮಾಡಬೇಕು ಎಂದು ಬಿಬಿಎಂಪಿಗೆ ಮನವಿ ಸಲ್ಲಿಸಿಲ್ಲ. ಬದಲಾಗಿ ಈ ರಸ್ತೆಯನ್ನು ಕನ್ನಡ ಮಯ ಮತ್ತು ಆಕರ್ಷಣೀಯವನ್ನಾಗಿಸಲು ಕೋರಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಸ್ಪಷ್ಟ ಪಡಿಸಿದ್ದಾರೆ.
ಆದರೆ, ಬಿಬಿಎಂಪಿಗೆ ಕಸಾಪದಿಂದ ನೀಡಿರುವ ಪತ್ರದ ಕುರಿತು ಸೂಕ್ತ ಮಾಹಿತಿ ಇಲ್ಲದೇ ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ ಎಂಬುದಾಗಿ ಪ್ರಸಾರ ಮಾಡಲಾಗಿದೆ. ಅಲ್ಲದೆ, ಈ ಸಂಬಂಧ ಯಾವುದೇ ಪ್ರಕಟಣೆಯಾಗಲಿ, ಮಾಧ್ಯಮ ಹೇಳಿಕೆಗಳನ್ನಾಗಲಿ ಬಿಡುಗಡೆ ಮಾಡಿರುವುದಿಲ್ಲ. ಕೆಲವರು ದುರುದ್ದೇಶದಿಂದ ಹಾಗೂ ಉದ್ದೇಶಪೂರ್ವಕವಾಗಿಯೇ ತಪ್ಪು ಗ್ರಹಿಕೆಯಿಂದ ಇಂತಹ ವರದಿಗಳು ಬಿತ್ತರಿಸಲಾಗಿದೆ ಎಂದರು.
ಆದಿಕವಿ ಪಂಪ ಮಹಾಕವಿ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಅಪಾರವಾದ ಗೌರವ ಹೊಂದಿದೆ. ಪರಿಷತ್ತಿನ ಕೇಂದ್ರ ಕಚೇರಿ ಇದೇ ರಸ್ತೆಯಲ್ಲಿ ಇರುವುದರಿಂದ, ಕನ್ನಡ ಸಾಹಿತ್ಯ ಪರಿಷತ್ತು ಹೆಮ್ಮೆಪಡುತ್ತದೆ. ಕಳೆದ ಕೆಲವು ದಿನಗಳ ಹಿಂದೆ, ಮಿಂಟೋ ಆಸ್ಪತ್ರೆ ವೃತ್ತದಿಂದ ಮಕ್ಕಳ ಕೂಟ ವೃತ್ತದವರೆಗಿನ ರಸ್ತೆಯನ್ನು ಕನ್ನಡಮಯಗೊಳಿಸಬೇಕು. ಕನ್ನಡ ಸಾಹಿತ್ಯ ಪರಂಪರೆ ಬಿಂಬಿಸುವ ಭೂದೃಶ್ಯ (ಲ್ಯಾಂಡ್ಸ್ಕೇಪ್) ಸಿದ್ಧಪಡಿಸಬೇಕು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಮಾರ್ಗವನ್ನು ಅಭಿವೃದ್ಧಿಪಡಿಸಿ ಕನ್ನಡಮಯ ವಾತಾವರಣ ನಿರ್ಮಾಣ ಮಾಡಬೇಕು ಎಂದು ವಿನಂತಿ ಮಾಡಲಾಗಿದೆ.
ಜೊತೆಗೆ, ಕೆಲವು ಪೂರ್ವಾಗ್ರಹ ಪೀಡಿತರು, ಕನ್ನಡ ಸಾಹಿತ್ಯ ಪರಿಷತ್ತಿನ ಏಳಿಗೆ ಸಹಿಸಲಾಗದೇ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ವಿಕೃತ ಮನಸ್ಸನ್ನು ಹೊಂದಿ, ವಿವಾದ ಸೃಷ್ಟಿಸುವ ಮೂಲಕವೇ ಪ್ರಚಾರದಲ್ಲಿ ಇರಬೇಕು ಎಂದು ದುರದ್ದೇಶ ಹೊಂದಿದವರು, ಯಾವಾಗಲೂ ಸಕ್ರಿಯವಾಗಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿ ಪ್ರಕಟಣೆ ಹೊರಡಿಸಿದ್ದಾರೆ.
(ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ವಿಚಾರ: ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ.. ಎನ್.ಆರ್.ರಮೇಶ್ ಸವಾಲು)