ಬೆಂಗಳೂರು : ಲಾಕ್ಡೌನ್ ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಬಡ್ಡಿ ರಹಿತ ಸಾಲ, ಆರೋಗ್ಯ ಮತ್ತು ಜೀವ ವಿಮೆ ಸೇರಿ ಸೂಕ್ತ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಕಾನೂನು ಮಂತ್ರಿಗೆ ಪತ್ರ ಬರೆದಿದ್ದಾರೆ.
ಸಂಘದ ಅಧ್ಯಕ್ಷ ಎ ಪಿ ರಂಗನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಎನ್ ಗಂಗಾಧರಯ್ಯ ಅವರು ಕೇಂದ್ರದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ವಕೀಲರಿಗೆ ವಿಮೆ ನೀಡುವ ಸಂಬಂಧ ಪರಿಶೀಲಿಸಿ ವರದಿ ನೀಡಲು ಕಳೆದ 2019ರ ಮಾರ್ಚ್ 8ರಂದು ಕಾನೂನು ವ್ಯವಹಾರಗಳ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
ಸಮಿತಿ 3 ತಿಂಗಳಲ್ಲೇ ವರದಿ ನೀಡಿತ್ತಾದ್ರೂ ತಾವು ವಕೀಲರಿಗೆ ಆರೋಗ್ಯ ಮತ್ತು ಅಕಾಲಿಕ ಮರಣಕ್ಕೆ ಪರಿಹಾರ ಸಿಗುವಂತಹ ಸಮಗ್ರ ವಿಮೆ ಸಿಗುವ ಕುರಿತು ಪರಿಶೀಲಿಸಲು ತಿಳಿಸಿದ್ದೀರಿ. ಅದರಂತೆ ಸಮಿತಿ ವಿಮಾ ಸಂಸ್ಥೆಗಳ ಜೊತೆ ಸಭೆ ನಡೆಸಿತ್ತು. 2019ರ ಜೂನ್ 3ರ ಬಳಿಕ ತಾವು 2ನೇ ಬಾರಿ ಕಾನೂನು ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ ಇವೇ ಭರವಸೆಗಳನ್ನು ನೀಡಿದ್ದೀರಿ. ಆದರೆ, ನಿಮ್ಮೆಲ್ಲ ಭರವಸೆಗಳು ಪೇಪರ್ ಮೇಲೆಯೇ ಉಳಿದಿವೆ. ಪ್ರಸ್ತುತ ಕೊರೋನಾ ಸೋಂಕು ಆವರಿಸಿ ಕೋರ್ಟ್‌ಗಳು ಫಿಸಿಕಲ್ ಕಲಾಪ ನಿಲ್ಲಿಸಿದ ಬಳಿಕ ವಕೀಲರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜತೆಗೆ ಆರೋಗ್ಯ ವಿಮೆಯಿಲ್ಲದೆ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಕಾನೂನು ಮಂತ್ರಿಯಾಗುವ ಮೊದಲು ತಾವು ಕೂಡ ಹಿರಿಯ ವಕೀಲರಾಗಿದ್ದವರು. ಹೀಗಾಗಿ ತಮಗೆ ವಕೀಲರ ಸಂಕಷ್ಟಗಳ ಬಗ್ಗೆ ಅರಿವಿರುತ್ತದೆ. ಆದ್ದರಿಂದ ವಕೀಲರಿಗೆ ಆರೋಗ್ಯ ಮತ್ತು ಜೀವ ವಿಮೆ ನೀಡಲು ತುರ್ತಾಗಿ ಕ್ರಮಕೈಗೊಳ್ಳಿ ಎಂದು ಸಂಘ ತನ್ನ ಪತ್ರದಲ್ಲಿ ಒತ್ತಾಯಿಸಿದೆ. ಅಲ್ಲದೇ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ತಲಾ 5 ಲಕ್ಷ ರೂಪಾಯಿವರೆಗೆ ಸಾಲವನ್ನು ಬಡ್ಡಿ ರಹಿತವಾಗಿ ನೀಡುವಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನಿರ್ದೇಶಿಸಿಬೇಕು ಎಂದು ಕೋರಿರುವ ಎಎಬಿ, ವಕೀಲರ ಸಮಸ್ಯೆಗಳಿಗೆ ಸ್ಪಂದಿಸದೇ ಹೋದಲ್ಲಿ ವಕೀಲ ಸಮುದಾಯ ದೇಶಾದ್ಯಂತ ಪ್ರತಿಭಟನೆಗೆ ಇಳಿಯಲಿದೆ ಎಂದು ಎಚ್ಚರಿಸಿದೆ.