ಬೆಂಗಳೂರು : ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿಯಾದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್ ನೇತೃತ್ವದ ನಿಯೋಗ ವಕೀಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿತು.
ಈ ಹಿಂದೆ ಗೃಹ ಹಾಗೂ ಕಾನೂನು ಇಲಾಖೆ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೇರಿದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಲು ಬೆಂಗಳೂರು ವಕೀಲರ ಸಂಘ ಸಿಎಂ ಅವರನ್ನು ಭೇಟಿಯಾಯಿತು. ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ ಬಳಿಕ ವಕೀಲರ ಬಹುಕಾಲದ ಬೇಡಿಕೆಗಳನ್ನು ಸಲ್ಲಿಸಿದರು.
ರಾಜ್ಯದಲ್ಲಿ ವಕೀಲರ ಮೇಲಿನ ದೌರ್ಜನ್ಯ ತಡೆ ಮತ್ತು ರಕ್ಷಣೆ ಕಾಯ್ದೆಯನ್ನು ತುರ್ತಾಗಿ ಜಾರಿಗೊಳಿಸಬೇಕು, ಬೆಂಗಳೂರಿನಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಯುವ ವಕೀಲರಿಗೆ 2 ವರ್ಷಗಳ ಕಾಲ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತಿರುವ ಪ್ರೋತ್ಸಾಹ ಧನವನ್ನು 5 ವರ್ಷಗಳ ಕಾಲ ರೂ. 5 ಸಾವಿರದಂತೆ ನೀಡಲು ಆದೇಶಿಸಬೇಕು ಹಾಗೂ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವಕೀಲರಿಗೆ ರಾಜ್ಯ ಸರ್ಕಾರದಿಂದ ಉಚಿತ ಆರೋಗ್ಯ ವಿಮೆ ನೀಡುಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು.