ಬೆಂಗಳೂರು : ಕೆಲವೊಮ್ಮೆ ದೊಡ್ಡವರ ಜಗಳ ನಡೆದಾಗ ಸಣ್ಣವರು ಎಂಟ್ರಿ ಕೊಟ್ರೆ ಏನಾಗುತ್ತೆ ಅನ್ನೋದಕ್ಕೆ ಈ ಕೇಸ್ ತಾಜಾ ಉದಾಹರಣೆಯಾಗಿದೆ. ನಮ್ಮಪ್ಪನಿಗೆ ಯಾಕೆ ಬೈದೆ ಅಂತಾ ಕೇಳೋಕೆ ಹೋಗಿದ್ದ ಆ ಯುವಕನಿಗೆ ಆತ ತಲೆ ಮೇಲೆ ಹೊಡೆದು ಹೋಗೋ ನಿಮ್ಮಪ್ಪನ್ನ ಕಳ್ಸು ಅಂದಿದ್ದರಂತೆ. ಅಷ್ಟಕ್ಕೆ ಕುಪಿತನಾದ ಬಿಸಿ ರಕ್ತದ ಯುವಕ ಆ ವ್ಯಕ್ತಿಯ ಎದೆಗೆ ಚಾಕು ಇರಿದು ಕೊಲೆ ಮಾಡಿ ಪರಾರಿ ಆಗಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಚಾಕು ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿರುವ ಘಟನೆ ನಿನ್ನೆ ರಾತ್ರಿ ರಾಜಗೋಪಾಲ ನಗರ ಠಾಣಾ ವ್ಯಾಪ್ತಿ ಮಾರುತಿ ಬಡಾವಣೆಯಲ್ಲಿ ನಡೆದಿದೆ. 42 ವರ್ಷದ ಅಜೀಂ ಎಂಬುರವನ್ನು ಬುಧವಾರ ರಾತ್ರಿ 8.30ರ ಸುಮಾರಿಗೆ ಕೊಲೆ ಮಾಡಿ ಅನೀಸ್ ಎಂಬಾತ ಎಸ್ಕೇಪ್ ಆಗಿದ್ದಾನೆ.
ಕಳೆದ ಎರಡು ದಿನಗಳ ಹಿಂದೆ ಮೃತ ಅಜೀಂ ಮತ್ತು ಆರೋಪಿ ಅನೀಸ್ ತಂದೆ ನಡುವೆ ಜಗಳವಾಗಿತ್ತು ಎನ್ನಲಾಗ್ತಿದೆ. ಅಜೀಂ ಆರೋಪಿಯ ತಂದೆಗೆ ಬೈದಿದ್ದಾನೆ. ಈ ಬಗ್ಗೆ ಕೇಳುವುದಕ್ಕೆ ಎಂದು ಹೋಗಿದ್ದ ಅನೀಸ್, ತಂದೆಗೆ ಯಾಕೆ ಹೊಡೆದೆ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಚಿಕ್ಕವನು ನೀನು. ನಿಮ್ಮ ತಂದೆಯನ್ನು ಕಳುಹಿಸು ಎಂದು ಅಜೀಂ ಅವರು ಅನೀಸ್ ತಲೆ ಮೇಲೆ ಒಂದು ಏಟು ಹೊಡೆದಿದ್ದಾರೆ.
ಕೂಡಲೇ ನನಗೆ ಹೊಡೀತಿಯಾ ಎಂದು ತನ್ನ ಜಾಕೇಟ್ನಲ್ಲಿದ್ದ ಚಾಕು ತೆಗೆದುಕೊಂಡ ಅನೀಸನು ಅಜೀಂ ಅವರಎದೆಗೆ ನಾಲ್ಕೈದು ಬಾರಿ ಚುಚ್ಚಿ ಸ್ಥಳದಿಂದ ಪರಾರಿ ಆಗಿದ್ದಾನೆ. ಕೂಡಲೇ ಅಲ್ಲಿದ್ದವರು ಅಜೀಂ ಅವರನ್ನು ಆಸ್ಪತ್ರೆಗೆ ದಾಖಲಿಸೋಕೆ ಮುಂದಾಗಿದ್ದಾರೆ. ಆದ್ರೆ ದಾರಿ ಮಧ್ಯದಲ್ಲೇ ಅಜೀಂ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ರಾಜಗೋಪಾಲ ನಗರ ಪೊಲೀಸರು ಆರೋಪಿ ಅನೀಸ್ ಪತ್ತೆಗೆ ಮುಂದಾಗಿದ್ದಾರೆ.
ಈ ಹಿಂದೆ ಅನೀಸ್ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಮಾಹಿತಿ ಕೂಡ ಇದೆ. ಸದ್ಯ ತನಿಖೆ ಮುಂದುವರೆದಿದ್ದು, ಆರೋಪಿ ಸಿಕ್ಕ ಮೇಲೆ ಕೇಸ್ ಬಗ್ಗೆ ಪೂರ್ಣ ಮಾಹಿತಿ ಗೊತ್ತಾಗಬೇಕಿದೆ.
ಇದನ್ನೂ ಓದಿ : ರಕ್ತ ಚಿಮ್ಮುವಂತೆ ವಿದ್ಯಾರ್ಥಿನಿ ಮೇಲೆ ಗುಂಪು ದಾಳಿ.. ವೈರಲ್ ವಿಡಿಯೋ