ಬೆಂಗಳೂರು: ನಗರದಲ್ಲಿಂದು ಬೆಳ್ಳಂಬೆಳಗ್ಗೆಯೇ ನೆತ್ತರು ಹರಿದಿದೆ. ಮಾಜಿ ಕಾರ್ಪೊರೇಟರ್ವೋರ್ವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಂಜನಪ್ಪ ಗಾರ್ಡನ್ ಬಳಿ ನಡೆದಿದೆ. ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ.
ಚಲವಾದಿ ಪಾಳ್ಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅಂಜನಪ್ಪ ಗಾರ್ಡನ್ ಬಳಿ ಬಡವರಿಗೆ ಫುಡ್ ಕಿಟ್ ವಿತರಿಸುತ್ತಿದ್ದರು. ಈ ವೇಳೆ ಇಬ್ಬರು ದುಷ್ಕರ್ಮಿಗಳು ರೇಖಾ ಅವರನ್ನು ಕೊಲೆ ಮಾಡುವ ಉದ್ದೇಶದಿಂದಾಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಮಾಜಿ ಕಾರ್ಪೊರೇಟರ್ ಕತ್ತು ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ನರಳಾಡಿದ್ದಾರೆ. ಸ್ಥಳೀಯರು ಈ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದ್ದಾರೆ.
ಸುದ್ದಿ ತಿಳಿದಾಕ್ಷಣವೇ ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ದೌಡಾಯಿಸಿ, ಗಂಭೀರವಾಗಿ ಗಾಯಗೊಂಡಿದ್ದ ರೇಖಾರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ರಕ್ತ ಸ್ರಾವದಿಂದ ರೇಖಾ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬರುವ ಕಾರ್ಪೊರೇಷನ್ ಚುನಾವಣೆ ಮತ್ತು ಕುಟುಂಬ ಕಲಹವೇ ಕೊಲೆಗೆ ಕಾರಣ ಎಂಬುದು ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ. ಕದಿರೇಶ್ಗೆ ಎರಡನೇ ಪತ್ನಿಯಾಗಿದ್ದ ರೇಖಾ ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಪೊಲೀಸರು ಬೆನ್ನತ್ತಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ರೇಖಾ ಪತಿ ಕದಿರೇಶ್ ಅವರನ್ನು ಸಹ ಕೊಲೆ ಮಾಡಲಾಗಿತ್ತು.