ಬೆಂಗಳೂರು: ಕಡೂರಿನಲ್ಲಿ ಪತ್ನಿಯನ್ನು ಕೊಲೆ ಮಾಡಿ ದಂತ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.
ದಂತ ವೈದ್ಯನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಈಗ ಬೆಂಗಳೂರಿನ ಆರ್. ಆರ್. ನಗರದ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡಾ. ರೇವಂತ್ ಈಕೆ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗ್ತಿದೆ. ಡಾ. ರೇವಂತ್ ತನ್ನ ಪತ್ನಿ ಕವಿತಾಳನ್ನ ಕಡೂರಿನಲ್ಲಿ ಕೊಲೆ ಮಾಡಿದ್ದ. ಕಡೂರಿನ ಮಸಾಲಾ ಡಾಬಾದ ಸಮೀಪ ಕಾರು ನಿಲ್ಲಿಸಿ ಪ್ರಿಯತಮೆಗೆ ಕರೆ ಮಾಡಿದ ನಂತರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಇದಾದ ಬಳಿಕ ರೇವಂತ್ನ ಪ್ರಿಯತಮೆ ತನ್ನ ಗಂಡನ ವಿರುದ್ಧ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯ ಗಂಡ ಸುಧೀಂದ್ರ ಬಿಎಂಟಿಸಿ ಚಾಲಕನಾಗಿದ್ದು, ಪತ್ನಿಯ ಲವ್ವಿ ಡವ್ವಿ ಬಗ್ಗೆ ವಿಚಾರ ಗೊತ್ತಿದ್ದರೂ ಸುಮ್ಮನಿದ್ದ ಎನ್ನಲಾಗಿದೆ. ಸುಧೀಂದ್ರ ಅವರ ಹೆಸರು ಡೆತ್ನೋಟ್ನಲ್ಲಿದ್ದು, ಇವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಹೆಚ್ಚಿನ ಓದಿಗಾಗಿ: ಚಿಕ್ಕಮಗಳೂರು: ಪತ್ನಿ ಕೊಲೆಯಾಗಿ ನಾಲ್ಕು ದಿನಕ್ಕೆ ದಂತ ವೈದ್ಯ ಆತ್ಮಹತ್ಯೆ!
ಒಂದೇ ಮನೆಯಲ್ಲಿದ್ದರು:
ಚಿಕ್ಕಮಗಳೂರಿನ ರೇವಂತ್ ಮನೆಯಲ್ಲಿ ಆತನ ಪ್ರಿಯತಮೆ ಕೂಡ ಬಾಡಿಗೆಗೆ ಇದ್ದಳು. ಈ ಹಿನ್ನೆಲೆ ಇಬ್ಬರ ಮಧ್ಯೆ ಪ್ರೀತಿ ಮತ್ತಷ್ಟು ಚಿಗುರೊಡೆದಿತ್ತು. ಇಬ್ಬರೂ ಬೇರೆ ಬೇರೆ ಮದುವೆ ಆಗಿದ್ದರೂ ತಮ್ಮ ಪ್ರೀತಿಯನ್ನು ಮುಂದುವರೆಸಿದ್ದರು. ಈ ಕಾರಣಕ್ಕಾಗಿ ರೇವಂತ್ ಮನೆಯಲ್ಲಿ ದಿನವೂ ಗಲಾಟೆ ನಡೆಯುತ್ತಿತ್ತು. ಫೆಬ್ರವರಿ 17ರಂದು ಈ ಗಲಾಟೆ ಅತಿರೇಕಕ್ಕೆ ತಿರುಗಿ ರೇವಂತ್ ತನ್ನ ಹೆಂಡತಿ ಕವಿತಾ ಬಾಯಿಗೆ ಬಟ್ಟೆ ಹಾಕಿ, ಹೊಟ್ಟೆ ಭಾಗಕ್ಕೆ ಇಂಜೆಕ್ಷನ್ ಮಾಡಿ ಕೊಂದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.