ಬೆಂಗಳೂರು: ಬಾಯಿಹುಣ್ಣಿನಿಂದ ಬಳಲುತ್ತಿದ್ದ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಖಾಸಗಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಮಹಿಳೆ ಮೇಲಿಂದ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶುಭಾ (45) ಮೃತ ಮಹಿಳೆ. ಇವರು ಹುಳಿಮಾವು ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದು, ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಅವರು ಪಡೆದುಕೊಂಡಿದ್ದರಂತೆ.
ಸುಭಾ ಅವರು ಮಹಡಿಯಿಂದ ಜಿಗಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶುಭಾ, ಜಯನಂದಮ್ ಎಂಬುವರೊಂದಿಗೆ ವಿವಾಹವಾಗಿದ್ದು, ದಂಪತಿಗೆ 8 ವರ್ಷದ ಹೆಣ್ಣು ಮಗಳಿದ್ದಾಳೆ. ಮಲೇಶಿಯಾದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಜಯನಂದಮ್ ಕೆಲಸ ಮಾಡುತ್ತಿದ್ದಾರೆ. ಶುಭಾ ಕಳೆದ ಮೂರು ತಿಂಗಳಿಂದ ಬಾಯಿ ಹುಣ್ಣಿನಿಂದ ಬಳಲುತ್ತಿದ್ದು, ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಬೆಳಗ್ಗೆ ವಾಕಿಂಗ್ ಹೊರಟ್ಟಿದ್ದ ಶುಭಾ ನಾಲ್ಕನೇ ಮಹಡಿಗೆ ಬಂದಿದ್ದಾರೆ. ಈ ವೇಳೆ ಖಿನ್ನತೆಗೆ ಒಳಗಾಗಿ ಮಹಡಿಯಿಂದ ಜಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.
ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.