ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಐಐಎಸ್ಸಿ ಸುಮಾರು 30 ಸ್ಟಾರ್ಟ್ ಅಪ್ ಗಳಿಗೆ ಆಶ್ರಯ (incubate) ನೀಡಿದ್ದು, ಅದರಲ್ಲಿ 8 ಸ್ಟಾರ್ಟ್ ಅಪ್ ಗಳು ವಿಶ್ವಕ್ಕೆ ಮಾರಕವಾಗಿರುವ ಕೋವಿಡ್ 19 ರ ವಿರುದ್ಧದ ಹೋರಾಟಕ್ಕೆ ಒಂದಲ್ಲ ಒಂದು ರೀತಿಯ ಆವಿಷ್ಕಾರ ಮಾಡುತ್ತಿದ್ದಾರೆ.
ಕೊರೊನಾ ನಿರ್ಮೂಲನೆಗಾಗಿ ಸಂಶೋಧನೆ ನಡೆಸುತ್ತಿರುವ ಸ್ಟಾರ್ಟ್ ಅಪ್ಗಳ ಪರಿಚಯ
1. ಎಕ್ಯೂನ್ ಬಯೋಟೆಕ್: ಪ್ರೊ. ಉತ್ಪಾಲ್ ಟಾಟು ನೇತೃತ್ವದ ಈ ಸ್ಟಾರ್ಟ್ ಅಪ್ ಜೀವ ರಸಾಯನಶಾಸ್ತ್ರ ವಿಭಾಗದಡಿಯಲ್ಲಿ ಸಂಶೋಧನೆ ನಡೆಸುತ್ತಿದ್ದು, ಕೋವಿಡ್ 19 ಪರೀಕ್ಷಾ ಕಿಟ್ ಗಳನ್ನ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಆವಿಷ್ಕಾರ ಮಾಡಿದೆ. ಇದಕ್ಕೆ ಐಸಿಎಂಆರ್ ಸಮ್ಮತಿಸಿದ್ದು, ಇನ್ನು ಕೆಲವೇ ತಿಂಗಳಲ್ಲಿ ಬೃಹತ್ ಉತ್ಪಾದನೆ ಮಾಡಿ ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮಾತುಕತೆಯಲ್ಲಿದೆ. ಇವರು ಆವಿಷ್ಕಾರ ಮಾಡಿರುವ ಆರ್ಟಿಪಿಸಿಆರ್ ಕಿಟ್, ಸೋಂಕು ಪತ್ತೆ ಹಚ್ಚುವಲ್ಲಿ ನಿಖರತೆ ಹೊಂದಿದೆ ಎಂದು ಹೇಳಿಕೊಂಡಿದ್ದಾರೆ.
2. ಪತ್ಶೋಧ ಹೆಲ್ತ್ ಕೇರ್: ಅನುಪತ್ ಹೆಸರಿನ ಉಪಕರಣ ಆವಿಷ್ಕಾರಗೊಳಿಸಿದ ಪತ್ಶೋಧ ಹೆಲ್ತ್ ಕೇರ್, ಕೋವಿಡ್ ನಿಂದ ಬಳಲುತ್ತಿರುವವರ ಸಕ್ಕರೆ ಪ್ರಮಾಣ, ನಿಶ್ಶಕ್ತಿ ಹಾಗೂ ಮೂತ್ರಪಿಂಡ ಸಮಸ್ಯೆಗಳನ್ನ ಒಂದೇ ಉಪಕರಣದಲ್ಲಿ ಕಂಡು ಹಿಡಿಯುವ ಕಿಟ್ ಆವಿಷ್ಕಾರ ಮಾಡಿದ್ದಾರೆ. ಒಂದೇ ಉಪಕರಣದಲ್ಲಿ ಇವೆಲ್ಲ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದ ಅನುಪತ್, ಚಿಕಿತ್ಸೆ ನೀಡುವಲ್ಲಿ ಹೆಚ್ಚು ಸಹಕಾರಿಯಾಗಲಿದೆ. ಇಷ್ಟೇ ಅಲ್ಲದೆ, ಈ ತಂಡ, ಕೋವಿಡ್ 19 ಪರೀಕ್ಷಾ ಕಿಟ್ ಗಳನ್ನ ವಿಶಿಷ್ಟವಾಗಿ ಆವಿಷ್ಕಾರ ಮಾಡಲಾಗುತ್ತಿದೆ.
3. ಅಸೂಕ ಲೈಫ್ ಸೈನ್ಸ್: ಅಸೂಕ ಲೈಫ್ ಸೈನ್ಸ್ ದೇಶೀಯವಾಗಿ RTPCR ಪರೀಕ್ಷಾ ಕಿಟ್ ಆವಿಷ್ಕಾರಗೊಳಿಸಿದ್ದು, ಇವರು ಉದ್ಯಮಿಗಳೊಂದಿಗೆ ಮಾತುಕತೆಯಲ್ಲಿದ್ದಾರೆ. ಅರ್ಧ ಗಂಟೆಯಲ್ಲಿ ನಿಖರವಾಗಿ ಕೋವಿಡ್ 19 ವೈರಸ್ ದೇಹದಲ್ಲಿ ಇದ್ಯಾ? ಇಲ್ವಾ? ಎಂದು ಹೇಳುವ ಸಾಮರ್ಥ್ಯ ಈ ಕಿಟ್ಗೆ ಇದೆ. ಅಷ್ಟೇ ಅಲ್ಲದೆ ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚಿನ ಸ್ವ್ಯಾಬ್ ಪರೀಕ್ಷೆ ನಡೆಸಿ ವೈರಸ್ ಇರುವ ಬಗ್ಗೆ ಫಲಿತಾಂಶ ನೀಡುತ್ತದೆ. ಇದಕ್ಕೆ ಉನ್ನತ ಮಟ್ಟದ ಉಪಕರಣದ ಅಗತ್ಯವೂ ಇಲ್ಲ ಎಂದು ಈ ಸ್ಟಾರ್ಟ್ ಅಪ್ ಹೇಳಿಕೊಂಡಿದೆ.
4. ಎಐ ಹೆಲ್ತ್ ವೇ: ಪಿನ್ ಕೋಡ್ ಬಳಕೆ ಮಾಡಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದ ನಗರದ ಯಾವ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ ಅದರ ಪ್ರಕಾರವಾಗಿ ಕೆಂಪು, ಕಿತ್ತಳೆ ಅಥವಾ ಹಸಿರು ಬಣ್ಣಗಳನ್ನ ನೀಡುತ್ತದೆ. ಪ್ರಾಯೋಗಿಕವಾಗಿ 1,000 ಕ್ಕೂ ಹೆಚ್ಚು ಜನರನ್ನ ಈ ಸಂಶೋಧನೆಯಲ್ಲಿ ಒಳಗೊಂಡಿದ್ದು, ಉತ್ತಮ ಫಲಿತಾಂಶ ನೀಡುತ್ತಿದೆ ಎಂದು ಎಐ ಹೆಲ್ತ್ ವೇ ಹೇಳಿದೆ. ಇದರಿಂದ ಆರೋಗ್ಯ ಇಲಾಖೆಗೆ ಹೆಚ್ಚು ಉಪಯೋಗವಾಗಲಿದೆ. ಬಂದಿರುವ ಫಲಿತಾಂಶದಿಂದ ಹೆಚ್ಚು ಆ್ಯಂಬುಲೆನ್ಸ್ ವ್ಯವಸ್ಥೆ ಅಥವಾ ಅಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆಯಂತಹ ನಿರ್ಧಾರಗಳನ್ನ ಸುಲಭವಾಗಿ ಕೈಗೊಳ್ಳಬಹುದು.
5. ಮೈಕ್ರೋ ಎಕ್ಸ್ : ಕೊರೊನಾ ವೈರಸ್ ತಗುಲಿದರೆ ಹೆಚ್ಚಿನ ಜನರಿಗೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ, ಕೆಲ ಸಂಶೋಧನೆಯ ಪ್ರಕಾರ, ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಶ್ವಾಸಕೋಶದ ಸ್ವಾಸ್ಥ್ಯ ಟ್ರಾಕ್ ಮಾಡಲು ಮೈಕ್ರೋ ಎಕ್ಸ್ ಈಗ ತಂತ್ರಜ್ಞಾನ ರೂಪಿಸುತ್ತಿದ್ದು, ಶ್ವಾಸಕೋಶದ ನಾಳಗಳ ಗಾತ್ರ ಹಾಗೂ ಸೋಂಕು ತಗಲುವ ಮುನ್ಸೂಚನೆ ನೀಡುತ್ತದೆ.
6. ಮೈನ್ ವಾಕ್ಸ್: ವೈರಸ್ನಿಂದ ಅತಿ ಹೆಚ್ಚಾಗಿ ಅಪಾಯಕ್ಕೊಳಪಡುವ ಜನರಿಗೆ ಬೇಕಾದ ಕೋವಿಡ್ ಲಸಿಕೆಯನ್ನ ಮೈನ್ ವಾಕ್ಸ್ ಸಂಶೋಧನೆ ನಡೆಸುತ್ತಿದ್ದು, ವಯೋವೃದ್ದರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ಸಹಾಯವಾಗಲಿದೆ. ಇನ್ನು ಆರು ತಿಂಗಳಲ್ಲಿ ಈ ಲಸಿಕೆ ತಯಾರಾಗಲಿದ್ದು ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದ್ರೋಗ ಸೇರಿದಂತೆ ಇತರೆ ಖಾಯಿಲೆ ಇರುವವರಿಗೆ ಈ ಲಸಿಕೆ ಕವಚವಾಗಲಿದೆ.
7. ಜನರಲ್ ಏರೋನಟಿಕ್ಸ್ : ವಿಮಾನ ಹಾಗೂ ಬಾಹ್ಯಾಕಾಶದ ಬಗ್ಗೆ ಸಂಶೋಧನೆ ನಡೆಸುವ ಜನರಲ್ ಏರೋನಟಿಕ್ಸ್, ಡ್ರೋನ್ ಬಳಸಿ ಕೀಟನಾಶಕಗಳನ್ನ ಸಿಂಪಡಿಸುವ ಹಾಗೂ ಸ್ಯಾನಿಟೈಸರ್ ಗಳನ್ನ ಸಿಂಪಡಿಸುವ ತಂತ್ರಜ್ಞಾನ ಆವಿಷ್ಕಾರ ಮಾಡಿದ್ದಾರೆ. ಇದರಿಂದ ದೊಡ್ಡ ಪ್ರದೇಶಗಳನ್ನ ಕಡಿಮೆ ಸಮಯದಲ್ಲಿ ಸ್ಯಾನಿಟೈಸ್ ಮಾಡಬಹುದು.
8. ಷಣ್ಮುಖ ಇನೋವೇಷನ್ಸ್: RTPCR ಪರೀಕ್ಷೆಯಲ್ಲಿ ಮಾತ್ರ ನಿಖರವಾಗಿ ಕೋವಿಡ್ ಸೋಂಕು ಇದ್ಯಾ, ಇಲ್ವಾ ಅನ್ನೋದು ತಿಳಿಯುತ್ತೆ. ಆದರೆ ಇದಕ್ಕೆ ಹೆಚ್ಚು ಉಪಕರಣಗಳ ಅಗತ್ಯವಿದೆ. ಇದಕ್ಕೆ ಮೊಬೈಲ್ RTPCR ಲ್ಯಾಬ್ ಗಳನ್ನ ಷಣ್ಮುಖ ಇನೋವೇಷನ್ಸ್ ಆವಿಷ್ಕಾರ ಮಾಡಿದ್ದಾರೆ.
ವಿಜ್ಞಾನಕ್ಕೆ ಅಪಾರ ಕೊಡುಗೆಗಳನ್ನ ನೀಡುತ್ತಿರುವ ಐಐಎಸ್ಸಿ ಈಗ ಜನರ ಆರೋಗ್ಯಕ್ಕೆ ಸವಾಲಾಗಿರುವ ಕೊರೊನಾ ನಿರ್ಮೂಲನೆಗಾಗಿ ಹಗಲಿರುಳು ಶ್ರಮಿಸುತ್ತಿದೆ.