ಬೆಂಗಳೂರು: 10 ವರ್ಷಗಳ ಹಿಂದೆ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ವ್ಯಕ್ತಿಯೊಬ್ಬ, ಕಾಲುಗಳನ್ನು ಕಳೆದುಕೊಂಡೆ ಎಂದು ಮನೆಯಲ್ಲಿ ಕುಳಿತುಕೊಳ್ಳದೆ ಇತರರ ಮೇಲೂ ಹೊರೆಯಾಗದೆ ತನ್ನ ಕಾಲ ಮೇಲೆ ತಾನು ನಿಂತುಕೊಂಡು ಸ್ವಾವಂಲಬಿ ಜೀವನ ಸಾಗಿಸುತ್ತ ಇತರರಿಗೆ ಮಾದರಿಯಾಗಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೈರನಾಯಕನಹಳ್ಳಿ ಗ್ರಾಮ ನಿವಾಸಿ ಬಾಬು ಎಂಬುವರು ಕಳೆದ 17 ವರ್ಷಗಳ ಹಿಂದೆ ತೆಂಗಿನ ಮರದ ಮೇಲಿನಿಂದ ಆಯಾ ತಪ್ಪಿ ಬಿದ್ದು ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಕೆಲವು ದಿನಗಳ ಕಾಲ ನರಕಯಾತನೆ ಅನುಭವಿಸಿದರು.
ಕುಟುಂಬದ ಜವಾಬ್ದಾರಿ ಸಹ ಇವರ ಹೆಗಲ ಮೇಲಿದ್ದು ವಯಸ್ಸಾದ ತಂದೆ ತಾಯಿಯನ್ನ ನೋಡಿಕೊಳ್ಳಬೇಕಾಗಿತ್ತು. ಒಂದು ಕಡೆ ಬಡತನ ಮತ್ತೊಂದು ಕಡೆ ಆಕಸ್ಮಿಕವಾಗಿ ನಡೆದ ದುರಂತ ಘಟನೆ ಇಂತಹ ಸಮಯದಲ್ಲಿ ಯಾವುದೇ ರೀತಿಯ ಧೃತಿಗೆಡದೆ ಜೀವನದಲ್ಲಿ ಮುನ್ನುಗ್ಗುತ್ತಿದ್ದಾರೆ.
ಸದ್ಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ವಾಸವಾಗಿರುವ ಬಾಬು ಆಟೊ ಚಾಲಕನಾಗಿ ಜೊತೆಯಲ್ಲಿ ಕಲ್ಲಂಗಡಿ ಹಣ್ಣುಗಳ ಮಾರಾಟ ಮಾಡಿ ಜೀವನದ ಬಂಡಿ ನಡೆಸುತ್ತಿದ್ದಾರೆ. ಸರ್ಕಾರದಿಂದ ಅಂಗವಿಕಲರ ಕಲ್ಯಾಣಕ್ಕೆ ಕೋಟ್ಯಂತರ ರೂ ಮೀಸಲಿಟ್ಟರು ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ, ಸರ್ಕಾರ ಇಂತಹವರನ್ನು ಗುರ್ತಿಸಿ ಉತ್ತಮ ಜೀವನಕ್ಕೆ ದಾರಿ ಮಾಡಿಕೊಡಬೇಕು, ಎಂದು ಬಾಬು ಸಂಬಂಧಿ ಸುಬ್ಬಾರೆಡ್ಡಿ ಹೇಳುತ್ತಾರೆ.
ಒಟ್ಟಿನಲ್ಲಿ ಮನುಷ್ಯನ ದೇಹದ ಎಲ್ಲಾ ಅಂಗಾಂಗಳು ಉತ್ತಮ ರೀತಿಯಲ್ಲಿ ಇದ್ದರು ಜೀವನದ ಬಂಡಿ ಸಾಗಿಸಲು ಸುಸ್ತಾಗಿ ಬಿಡುತ್ತಾರೆ, ಆದ್ರೆ ಬಾಬು ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡರು ಕಷ್ಟದಲ್ಲಿ ಜೀವನವನ್ನು ಸಾಗಿಸುತ್ತಿರುವುದು ಶ್ಲಾಘನೀಯ.