ಬೆಂಗಳೂರು: ರಸ್ತೆಬದಿ ಮಲಗಿದ್ದ ಬೀದಿನಾಯಿ ಮೇಲೆ ಕಾರು ಹತ್ತಿಸಿ ಅದನ್ನು ಕೊಲ್ಲಲ್ಲು ಮುಂದಾದ ಆರೋಪದ ಮೇಲೆ ನಿವೃತ್ತ ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಪಶು ವೈದ್ಯ ರಮೇಶ್ ನೀಡಿದ ದೂರಿನ ಆಧಾರದ ಮೇರೆಗೆ ಹುಳಿಮಾವು ನಿವಾಸಿ ನಿವೃತ್ತ ಸಬ್ ಇನ್ಸ್ಪೆಕ್ಟರ್ ನಾಗೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿರುವ ನಾಗೇಶ್ ಕುಟುಂಬ ಸಮೇತ ಹುಳಿಮಾವು ದೊಡ್ಡಕಮ್ಮನಹಳ್ಳಿಯಲ್ಲಿ ವಾಸಿಸುತ್ತಿದ್ದರು. ಭಾನುವಾರ ಮಧ್ಯಾಹ್ನ ನಾಗೇಶ್ ಮನೆ ಸಮೀಪವೇ ಬೀದಿ ನಾಯಿಯೊಂದು ರಸ್ತೆ ಬದಿ ನಿದ್ರಿಸಿತ್ತು. ಅದೇ ರಸ್ತೆಯಲ್ಲಿ ಕಾರಿನಲ್ಲಿ ಬಂದ ನಾಗೇಶ್ ಹಾರನ್ ಮಾಡಿದರೂ ನಾಯಿ ಎದ್ದಿರಲಿಲ್ಲ. ಇದರಿಂದ ಆಕ್ರೋಶಗೊಂಡ ನಾಗೇಶ್ ತಮ್ಮ ಕಾರನ್ನು ನಾಯಿ ಮೇಲೆ ಹರಿಸಿದ್ದಾರೆ. ಪರಿಣಾಮ ನಾಯಿ ಗಂಭೀರವಾಗಿ ಗಾಯಗೊಂಡಿದೆ.
ಈ ವಿಚಾರ ಗಮನಕ್ಕೆ ಬಂದ ಕೂಡಲೇ ಪಶು ವೈದ್ಯ ರಮೇಶ್ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನಾಗೇಶ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ನಾಗೇಶ್ ಬೀದಿ ನಾಯಿ ಮೇಲೆ ಕಾರು ಹತ್ತಿಸಿರುವ ದೃಶ್ಯವು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.