ಬೆಂಗಳೂರು: ಇಬ್ಬರು ಫುಡ್ ಡೆಲಿವರಿ ಬಾಯ್ಸ್ ಮೇಲೆ ಕಾರು ಹರಿಸಿ ಅವರ ಸಾವಿಗೆ ಕಾರಣನಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೈಕ್ನಲ್ಲಿ ತೆರಳಲು ಸಜ್ಜಾಗಿದ್ದ ಇಬ್ಬರು ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ಸ್ ಮೇಲೆ ಕಾರು ಹರಿದಿತ್ತು. ಆದರೆ ಅಪಘಾತವಾದ ಬಳಿಕ ಚಾಲಕ ಕಾರು ಸಹಿತ ಸ್ಥಳದಿಂದ ಎಸ್ಕೇಪ್ ಆಗಿದ್ದ.
ಘಟನೆಯಲ್ಲಿ ಇಬ್ಬರು ಯುವಕರು ಸಾವನಪ್ಪಿದ್ದರು. ಬಳಿಕ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಕಾರು ಚಾಲಕ ಭರತ್ ಎಂಬಾತನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಅಪಘಾತ ನಡೆದ ಸುತ್ತಲಿನ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದ ಪೊಲೀಸರ ಬಳಿ ಮೊದಲು ಭರತ್ ತಪ್ಪಿಸಿಕೊಳ್ಳಲು ಸುಳ್ಳು ಹೇಳಿದ್ದ. ಮಂಡ್ಯ ಮೂಲದ ನನ್ನ ಸ್ನೇಹಿತನಿಗೆ ಮದುವೆಗೆ ತೆರಳಲು ಕಾರು ನೀಡಿದ್ದೆ ಎಂದು ಕಥೆ ಕಟ್ಟಿದ್ದ. ಬಳಿಕ ಪೊಲೀಸರು ಮಂಡ್ಯದಲ್ಲಿದ್ದ ಭರತ್ ಸ್ನೇಹಿತನನ್ನು ವಿಚಾರಣೆ ನಡೆಸಿದ್ದರು. ಆದರೆ ಈ ವೇಳೆ ಆತನ ಹೇಳಿಕೆ ಸುಳ್ಳೆಂದು ತಿಳಿದಿದ್ದು, ಬಳಿಕ ಆತನೇ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಭರತ್ ಯಶವಂತಪುರದಲ್ಲಿ ಟ್ರ್ಯಾವೆಲ್ ಏಜೆಂನ್ಸಿ ನಡೆಸುತ್ತಿದ್ದು, ರಾತ್ರಿ ಹೋಟೆಲ್ವೊಂದರಲ್ಲಿ ಊಟ ಕಟ್ಟಿಸಿಕೊಂಡು ತೆರಳುವ ವೇಳೆ ದಾರಿ ಮಧ್ಯೆ ಅಪಘಾತ ಸಂಭವಿಸಿದೆ. ಆದರೆ ಅಪಘಾತದ ಬಳಿಕ ಕಾರನ್ನು ನಿಲ್ಲಿಸದೆ ಅಲ್ಲಿಂದ ತೆರಳಿದ್ದ. ಈ ಕುರಿತು ಯಶವಂತಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಜಾಲಹಳ್ಳಿ ಠಾಣೆ ಪೋಲಿಸರು ಭರತ್‌ನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಹಿಟ್ ಆ್ಯಂಡ್ ರನ್ಗೆ ಸ್ವಿಗ್ಗಿ ಬಾಯ್ಸ್ ಬಲಿ: ಎದೆ ಝಲ್ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ