ಬೆಂಗಳೂರು: ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ನಿಯೋಜಿತರಾಗಿರುವ ನಾರಾಯಣಸ್ವಾಮಿ ಇಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪೂಜೆ ನೆರವೇರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎರಡು ದಿನದ ಹಿಂದೆ ಇವರನ್ನು ಮುಖ್ಯಸಚೇತಕರನ್ನಾಗಿ ಘೋಷಿಸಿ ಆದೇಶ ಹೊರಡಿಸಿತ್ತು. ನಿನ್ನೆ ಆದೇಶದ ಪ್ರತಿ ಸ್ವೀಕರಿಸಿದ್ದ ನಾರಾಯಣಸ್ವಾಮಿ ಇಂದು ಮೊದಲ ಮಹಡಿಯಲ್ಲಿ ತಮಗೆ ನೀಡಲಾದ ಕಚೇರಿಯ ಪೂಜೆ ನೆರವೇರಿಸಿದ್ದಾರೆ. ಸಾಂಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ ಕಚೇರಿ ಪ್ರವೇಶಿಸಿದ ನಾರಾಯಣಸ್ವಾಮಿ ಅವರನ್ನು ಕುಟುಂಬ ಸದಸ್ಯರು ಅಭಿನಂದಿಸಿದರು.
ನಲವತ್ತು ವರ್ಷಗಳ ತಮ್ಮ ರಾಜಕೀಯ ಅನುಭವವನ್ನು ಗುರುತಿಸಿ ಮಹತ್ವದ ಜವಾಬ್ದಾರಿ ನೀಡಿರುವುದಕ್ಕೆ ಕಾಂಗ್ರೆಸ್ ಅಧಿನಾಯಕಿ ಹಾಗೂ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲ ರಾಜ್ಯ ನಾಯಕರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದರು.
ಪಕ್ಷದ ಅಧಿನಾಯಕಿ ನನ್ನ ಸೇವೆ ಮೆಚ್ಚಿ ಅವಕಾಶ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಸಹಕಾರ ನೀಡುತ್ತೇನೆ. ನನಗೆ ಅವಕಾಶ ನೀಡಿದವರ ಋಣ ತೀರಿಸುತ್ತೇನೆ. ವಿಧಾನ ಪರಿಷತ್ನಲ್ಲಿ ಕೂಡ ಎಲ್ಲರ ಸಹಕಾರ ಕೇಳಿದ್ದೇನೆ. ಪಕ್ಷ ವಹಿಸಿದ ಜವಾಬ್ದಾರಿಗೆ ಚ್ಯುತಿ ಬಾರದ ರೀತಿ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.