ಬೆಂಗಳೂರು: ಮಾಜಿ ಸಚಿವ ಎ ಮಂಜು ಅವರು ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ಗೆ ಸೇರ್ಪಡೆಯಾದರು. ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಇಂದು ಸಂಜೆ ಎ.ಮಂಜು ಹಾಗೂ ಅವರ ಹಲವು ಬೆಂಬಲಿಗರು ಬಿಜೆಪಿ ತೊರೆದು ಜೆಡಿಎಸ್ಗೆ ಸೇರ್ಪಡೆಗೊಂಡರು. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಪಕ್ಷದ ಶಾಲು ಹಾಕಿ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು. ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರು ಪಕ್ಷ ಬಿಡುತ್ತಿರುವ ಹಿನ್ನೆಲೆಯಲ್ಲಿ ಎ.ಮಂಜು ಅವರನ್ನು ಪಕ್ಷಕ್ಕೆ ಕರೆತಂದು ಅಭ್ಯರ್ಥಿ ಮಾಡುವ ನಿರ್ಧಾರವನ್ನು ದಳಪತಿಗಳು ಮಾಡಿದ್ದಾರೆ. ಹಾಗಾಗಿ, ಎ.ಮಂಜು ಅವರ ಜೊತೆಗೆ ಮಾತುಕತೆ ನಡೆಸಿ ಇದೀಗ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
ಈ ಮೊದಲೇ ಘೋಷಿಸಿದ್ದ ಹೆಚ್ಡಿಕೆ: ಅರಕಲಗೂಡು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಎ ಮಂಜು ಕಣಕ್ಕೆ ಇಳಿಯಲಿದ್ದಾರೆ ಎಂದು ಈ ಮೊದಲೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಿಂದ ಎ ಮಂಜು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಆಗಲಿದ್ದಾರೆ ಎಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕುಮಾರಸ್ವಾಮಿ ಕಳೆದ ವಾರ ತಿಳಿಸಿದ್ದರು.
ಇದನ್ನೂ ಓದಿ: ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಸೃಷ್ಟಿಸಿದ ಭವಾನಿ ರೇವಣ್ಣ ಹೇಳಿಕೆ: ಜೆಡಿಎಸ್ ವರಿಷ್ಠರ ನಡೆ ಏನು?
ಅರಕಲಗೂಡು ಕ್ಷೇತ್ರದಿಂದ ಮಂಜು ಅವರ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದ್ದೇವೆ. ಈಗಾಗಲೇ ಎ ಮಂಜು ಜೊತೆ ಮಾತುಕತೆ ನಡೆಸಿದ್ದು, ಬಹುತೇಕ ಅಂತಿಮ ಹಂತದಲ್ಲಿದೆ. ಎಟಿ ರಾಮಸ್ವಾಮಿ ಹಾಗೂ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರು ಕಳೆದ ಎರಡು ವರ್ಷಗಳಿಂದ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಹಾಗಾಗಿ, ಅವರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು.
2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾಗಿದ್ದ ಎ.ಮಂಜು ಅವರು ಬದಲಾದ ರಾಜಕೀಯ ವಿದ್ಯಮಾನಗಳಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆದರೆ ಇವರ ಪುತ್ರ ಕಾಂಗ್ರೆಸ್ನಲ್ಲೇ ಉಳಿದಿದ್ದರು. ಬಿಜೆಪಿಯಿಂದ ಟಿಕೆಟ್ ಪಡೆದು ಅರಕಲಗೂಡಿನಿಂದ ಸ್ಪರ್ಧಿಸಿದ್ದ ಮಂಜು ಅವರು, ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ಅವರ ವಿರುದ್ಧ ಕಳೆದ ಚುನಾವಣೆಯಲ್ಲಿ ಸೋತಿದ್ದರು. ಎ.ಮಂಜು ಅವರ ಪುತ್ರ ಮಂಥರ್ ಗೌಡಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯು ಮಂಡ್ಯ ಜಿಲ್ಲೆಯ ಪ್ರಭಾರಿ ಹಾಗೂ ಉಳಿದ ಎಲ್ಲಾ ಜವಾಬ್ದಾರಿಗಳಿಂದ ಮಂಜು ಅವರನ್ನು ಬಿಡುಗಡೆಗೊಳಿಸಿ 2021ರಲ್ಲಿ ಆದೇಶಿಸಿತ್ತು. ಇದೀಗ ಮಂಜು ಜೆಡಿಎಸ್ ಸೇರ್ಪಡೆಯಾದರು.
ಇದನ್ನೂ ಓದಿ: ಅರಕಲಗೂಡು ಕ್ಷೇತ್ರಕ್ಕೆ ಎ ಮಂಜು ಜೆಡಿಎಸ್ ಅಭ್ಯರ್ಥಿ: ಹೆಚ್ ಡಿ ಕುಮಾರಸ್ವಾಮಿ