ಬೆಂಗಳೂರು: ಲೋಕಸಭೆ ಚುನಾವಣೆಯ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ನ ಮಾಜಿ ಸಚಿವ ಎ.ಮಂಜು ಅವರು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ವೈ ಅವರ ಧವಳಗಿರಿ ನಿವಾಸಕ್ಕೆ ಇಂದು ಭೇಟಿ ನೀಡಿದ ಎ.ಮಂಜು ಕೆಲ ಸಮಯ ಯಡಿಯೂರಪ್ಪನವರೊಂದಿಗೆ ಚರ್ಚೆ ನಡೆಸಿದರು. ಇವರಿಗೆ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಜೊತೆಯಾಗಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರೀತಂಗೌಡ, ಮಾಜಿ ಸಚಿವ ಎ.ಮಂಜು ಅವರು ಬಿಜೆಪಿಗೆ ಸೇರಿದರೆ ಸ್ವಾಗತಿಸುವುದಾಗಿ ಹೇಳಿದರು. ಲೋಕಸಭೆಗೆ ಹಾಸನದಿಂದ ಪ್ರಬಲ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಎ.ಮಂಜು ಅವರು ಬಿಜೆಪಿಗೆ ಸೇರ್ಪಡೆಯಾಗಲು ಉತ್ಸುಕರಾಗಿದ್ದಾರೆ. ಅವರು ಬಿಜೆಪಿಗೆ ಸೇರ್ಪಡೆಯಾದರೆ ನಾನೂ ಮತ್ತು ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಸ್ವಾಗತಿಸುತ್ತೇವೆ ಎಂದರು.
ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಜೊತೆ ನಾವು ಚುನಾವಣೆ ಮಾಡುತ್ತೇವೆ. ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರಾದ ಬೆಳ್ಳಿ ಪ್ರಕಾಶ್ ಹಾಗೂ ನಾನು ಬಿಜೆಪಿಯಲ್ಲಿದ್ದೇವೆ. ಎ.ಮಂಜು ಅವರು ಪಕ್ಷ ಸೇರುವುದಾಗಿ ಹೇಳಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ನಾವು ಸಹ ಚರ್ಚೆಯ ವೇಳೆ ಭಾಗಿಯಾಗಿ ಶುಭ ಕೋರಿದ್ದೇವೆ ಎಂದು ನುಡಿದರು.
ಎ.ಮಂಜು ಅವರಿಗೆ ಟಿಕೆಟ್ ನೀಡುವ ವಿಚಾರ ಕೋರ್ ಕಮಿಟಿ ತೀರ್ಮಾನ ಮಾಡುತ್ತದೆ. ವರಿಷ್ಠರು ಈ ಬಗ್ಗೆ ನಿರ್ಧರಿಸುತ್ತಾರೆ. ಹಾಸನದಲ್ಲಿ ಬಿಜೆಪಿ ಗೆಲ್ಲಬೇಕು. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಹಾಗಾಗಿ, ಅತ್ಯಂತ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ಮುಖಂಡ ವಿಜಯೇಂದ್ರ ಮಾತನಾಡಿ, ಮಂಡ್ಯದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಸುಮಲತಾ ಅಂಬರೀಶ್ ಅವರ ನಿಲುವು ಇನ್ನೂ ಅಂತಿಮವಾಗಿಲ್ಲ. ಹಿರಿಯ ನಾಯಕ ಎಸ್.ಎಂ.ಕೃಷ್ಣಾರನ್ನು ಭೇಟಿ ಮಾಡಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ನಾಯಕರು ಈ ಕುರಿತು ಚರ್ಚೆ ನಡೆಸಲಿದ್ದು, ನಂತರ ಕೇಂದ್ರದ ನಾಯಕರ ಗಮನಕ್ಕೆ ಇದನ್ನು ತರಲಾಗುವುದು ಎಂದರು.
ಕಾರ್ಯಕರ್ತರ ನಿರ್ಧಾರಕ್ಕೆ ಬದ್ಧ :
ಲೋಕಸಭಾ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಎ.ಮಂಜು, ನಾನು ಕಾರ್ಯಕರ್ತರ ಸಭೆ ಕರೆದಿದ್ದೇನೆ. ನಮ್ಮ ಕಾರ್ಯಕರ್ತರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು. ಕಾರ್ಯಕರ್ತರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.
ಇನ್ನು ಬಿಜೆಪಿಗೆ ಸೇರುವ ಬಗ್ಗೆ ಮಾತನಾಡಿದ ಮಂಜು, ನಾನು ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ. ಆದರೆ, ಕಾರ್ಯಕರ್ತರ ಅಭಿಪ್ರಾಯದಂತೆ ಮುನ್ನಡೆಯುತ್ತೇನೆ. ಇಲ್ಲಿಯವರೆಗೆ ನನ್ನನ್ನು ಸಾಕಿರೋದು ನಮ್ಮ ಕಾರ್ಯಕರ್ತರೇ. ಕಾರ್ಯಕರ್ತರ ತೀರ್ಮಾನವೇ ನನಗೆ ಅಂತಿಮ ಎಂದರು.