ಬೆಂಗಳೂರು : ಸಾಲ ಪಡೆದ ಸ್ನೇಹಿತ ಹಣ ವಾಪಸ್ ನೀಡದೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಜುನಾಥ್ ಆತ್ಮಹತ್ಯೆಗೆ ಶರಣಾದ ಯುವಕ. ಸಾಯುವ ಮುನ್ನ ಫೇಸ್ಬುಕ್ನಲ್ಲಿ ತಾನು ಅನುಭವಿಸಿದ ಯಾತನೆ ಬಗ್ಗೆ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾನೆ. ಕಳೆದ ಆರು ತಿಂಗಳ ಹಿಂದೆ ಹೆಣ್ಣೂರು ನಿವಾಸಿ ಪವನ್ ಎಂಬಾತನಿಗೆ 11 ಲಕ್ಷ ರೂ. ಹಣ ನೀಡಿದ್ದನಂತೆ.
ಆದರೆ, ಈವರೆಗೂ ವಾಪಸ್ ನೀಡಿಲ್ಲವಂತೆ. ಹಣ ಕೇಳಲು ಹೋದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿರುವ ಯುವಕ, ತನ್ನ ಸಾವಿಗೆ ಪವನ್ ಕಾರಣ ಎಂದು ಫೇಸ್ಬುಕ್ ವಿಡಿಯೋದಲ್ಲಿ ಹೇಳಿದ್ದಾನೆ.
ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲಿಸಿದ್ದು, ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.