ಬೆಂಗಳೂರು: ನಗರದಲ್ಲಿ ವಿಚಿತ್ರ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನವವಿವಾಹಿತನೊಬ್ಬ ತನ್ನ ಹೆಂಡತಿಯನ್ನು ಬೆಂಗಳೂರಿನ ಟ್ರಾಫಿಕ್ನಲ್ಲಿ ಬಿಟ್ಟು ಪರಾರಿಯಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಕಳೆದ ಫೆಬ್ರವರಿ 15 ರಂದು ಮದುವೆಯಾಗಿದ್ದ ನವದಂಪತಿ ಮರುದಿನ 16 ರಂದು ಚರ್ಚ್ಗೆ ಹೋಗಿ ಪ್ರಾರ್ಥನೆ ಸಲ್ಲಿಸಿ ವಾಪಸ್ ಬರುತ್ತಿದ್ದರು. ಆಗ ನಗರದ ಮಹದೇವಪುರ ಟೆಕ್‌ಕಾರಿಡಾರ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿತ್ತು. ಆಗ ನವವಿವಾಹಿತ ಕಾರಿನ ಬಾಗಿಲು ತೆರೆದು ಪರಾರಿಯಾಗಿದ್ದಾನೆ. ಈ ಘಟನೆ ಬಗ್ಗೆ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ನವ ವಿವಾಹಿತೆ ದೂರು ದಾಖಲಿಸಿದ್ದಾರೆ.
ಹೆಂಡ್ತಿಯನ್ನು ಬಿಟ್ಟು ಹೋಗಲು ಕಾರಣವೇನು?: ಈಗ ಪರಾರಿಯಾಗಿರುವ ನವವಿವಾಹಿತ ಮದುವೆಗೂ ಮುನ್ನ ಗೋವಾದಲ್ಲಿ ಉದ್ಯೋಗ ಮಾಡುತ್ತಿದ್ದನು. ಆತ ಗೋವಾದಲ್ಲಿರುವಾಗ ಬೇರೆ ಯುವತಿಯೊಂದಿಗೆ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ. ಆದ್ರೂ ಆ ಯುವಕ ಫೆಬ್ರವರಿ 15 ರಂದು ಬೇರೊಬ್ಬಳನ್ನು ವಿವಾಹವಾಗಿದ್ದಾನೆ.
ಇನ್ನು ಯುವಕ ಬೇರೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿರುವುದರ ಬಗ್ಗೆ ಮದುವೆಯಾಗುವ ಹೆಣ್ಣಿಗೆ ಗೊತ್ತಿತ್ತು. ಆದರೆ, ಮದುವೆಗೂ ಮುನ್ನ ಆ ಯುವಕ ಗೋವಾದಲ್ಲಿರುವ ಯುವತಿಯೊಂದಿಗಿನ ಸಂಬಂಧವನ್ನು ಬಿಟ್ಟು ಬಿಡುವುದಾಗಿ ಭರವಸೆ ಕೊಟ್ಟಿದ್ದನು. ಆದರೆ, ಗೋವಾ ಯುವತಿಗೆ ಈತ ಮದುವೆ ಮಾಡಿಕೊಂಡಿರುವ ವಿಷಯ ತಿಳಿದಿದ್ದು, ಆಕೆಗೆ ಹೆದರಿ ತನ್ನ ಹೆಂಡ್ತಿಯನ್ನು ಟ್ರಾಫಿಕ್ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಈ ವೇಳೆ, ಹೆಂಡತಿ ಕೂಡಾ ಆತನನ್ನು ಹಿಂಬಾಲಿಸಿ ಹಿಡಿಯಲು ಪ್ರಯತ್ನಿಸಿದ್ದರು. ಆದರೆ, ಆಕೆಗೆ ಸಾಧ್ಯವಾಗಲಿಲ್ಲ.
ಕಳೆದ ತಿಂಗಳು 16 ರಂದು ಕಾಣೆಯಾದ ವರನನ್ನ ಹುಡುಕಿಕೊಡುವಂತೆ ಮಾರ್ಚ್ 5ರಂದು ಸಂತ್ರಸ್ತ ಮಹಿಳೆ ಪೊಲೀಸರ ಮೊರೆ ಹೋಗಿ ದೂರು ನೀಡಿದ್ದರು. ನನ್ನ ಗಂಡ ಗೋವಾದಲ್ಲಿ ಬೇರೆ ಹುಡುಗಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಅವರಿಬ್ಬರು ಆತ್ಮೀಯವಾಗಿ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಹುಡುಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಅವಮಾನಕ್ಕೆ ಬೆದರಿದ ನನ್ನ ಗಂಡ ನನ್ನನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದವರಾಗಿರುವ ನನ್ನ ಪತಿ ವಿವಾಹ ನಿಶ್ಚಯವಾದಾಗ ನನಗೆ ಬೇರೆ ಸಂಬಂಧ ಹೊಂದಿರುವ ಬಗ್ಗೆ ಹೇಳಿಕೊಂಡಿದ್ದರು. ಈ ಸಂಬಂಧವನ್ನು ಕೊನೆಗೊಳಿಸುವುದಾಗಿ ನನಗೆ ಭರವಸೆ ನೀಡಿ ಬಳಿಕ ಮದುವೆ ಮಾಡಿಕೊಂಡಿದ್ದರು. ಆದರೆ, ಮದುವೆಯಾದ ಬಳಿಕ ನನ್ನ ಪತಿಗೆ ಗೋವಾದಲ್ಲಿರುವ ಯುವತಿ ಬ್ಲ್ಯಾಕ್ಮೇಲ್ ಮಾಡಲು ಮುಂದಾಗಿದ್ದಾರೆ. ಇದರಿಂದ ಹೆದರಿ ನನ್ನ ಪತಿ ಓಡಿ ಹೋಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದು, ನಡು ರಸ್ತೆಯಲ್ಲೇ ಹೆಂಡ್ತಿಯನ್ನು ಬಿಟ್ಟು ಹೋಗಿರುವ ನವ ವಿವಾಹಿತನ ಪತ್ತೆಗೆ ಶೋಧ ಕಾರ್ಯ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ: 262 ಕೋಟಿ ನಗದು ಕದಿಯಲು ಯತ್ನ.. ಪೊಲೀಸರ ಗುಂಡಿನ ದಾಳಿಗೆ ಪರಾರಿಯಾದ ದರೋಡೆಕೋರರು, ಇಬ್ಬರು ಸಾವು