ಬೆಂಗಳೂರು: ಕೊರೊನಾ ಸೋಂಕಿಗೆ ನಗರದ ಮತ್ತೊಬ್ಬ ನಿವಾಸಿ ಬಲಿಯಾಗಿದ್ದಾರೆ.
ಪೆನ್ಷನ್ ಮೊಹಲ್ಲಾ ನಿವಾಸಿಯಾಗಿರುವ ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇವತ್ತು ಕೊನೆಯುಸಿರೆಳೆದಿದ್ದು, ಕೋವಿಡ್ 19 ಪರೀಕ್ಷೆ ಮಾಡಿದಾಗ ಪಾಸಿಟಿವ್ ಕಂಡುಬಂದಿದೆ. ಸದ್ಯ ಇವರ ಸಂಪರ್ಕದಲ್ಲಿ ಇರುವವರನ್ನು ಕ್ವಾರಂಟೈನ್ ಮಾಡಲಾಗಿದೆ. ಮೃತ ವ್ಯಕ್ತಿಯ ಪ್ರಯಾಣದ ಇತಿಹಾಸ ಪತ್ತೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯಧಿಕಾರಿ ಮನೋರಂಜನ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 397ಕ್ಕೆ ಏರಿದ್ದರೆ, ಇದರಲ್ಲಿ 237 ಮಂದಿಯನ್ನು ವಿವಿಧ ಕೋವಿಡ್ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಡಿಸ್ಜಾರ್ಜ್ ಮಾಡಲಾಗಿದೆ. ಉಳಿದ 148 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ನಗರದಲ್ಲಿ ಮಾರಕ ರೋಗದಿಂದ ಸಾವಿಗೀಡಾದವರ ಸಂಖ್ಯೆ 12ಕ್ಕೆ ಏರಿದೆ. ರಾಜ್ಯದಲ್ಲಿ 53 ಮಂದಿ ಕೊರೊನಾಗೆ ಸಾವನ್ನಪ್ಪಿದ್ದು, ಇಬ್ಬರು ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ.
ಪಾದರಾಯನಪುರದಲ್ಲಿ ಸಾಮುದಾಯಿಕ ಪರೀಕ್ಷೆ ಕಡಿವಾಣ:
ಪಾದರಾಯನಪುರದಲ್ಲಿ ಸದ್ಯ ಪಾಲಿಕೆ ಸಾಮುದಾಯಿಕ ಪರೀಕ್ಷೆ ಕಡಿವಾಣ ಹಾಕಿದೆ. ಲ್ಯಾಬ್‌ಗಳಲ್ಲಿ ಸ್ಯಾಂಪಲ್ಸ್ ಸಂಖ್ಯೆ ಹೆಚ್ಚಾದ ಕಾರಣ, ವರದಿಗಾಗಿ ಮೂರು ಅಥವಾ ನಾಲ್ಕು ದಿನ ಕಾಯಬೇಕಿತ್ತು. ಈ ಹಿನ್ನೆಲೆ ಸ್ವಲ್ಪದಿನದ ಮಟ್ಟಿಗೆ ಈ ಪರೀಕ್ಷೆಯನ್ನು ನಿಲ್ಲಿಸಲಾಗಿದೆ.