ಬೆಂಗಳೂರು: ಕೆಫೆ ಕಾಫಿ ಡೇ ಮ್ಯಾನೆಜರ್ ಮೇಲೆ ವ್ಯಕ್ತಿವೋರ್ವ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಪ್ರಕರಣ ನಗರದ ಕಸ್ತೂರಿ ನಗರ ಕೆಫೆ ಕಾಫಿ ಡೇಯಲ್ಲಿ ನಡೆದಿದೆ.
ನವೀನ್ ಕುಮಾರ್ ಹಲ್ಲೆಗೊಳಗಾದ ಮ್ಯಾನೇಜರ್ ಆಗಿದ್ದು, ಸೋಮವಾರ ರಾತ್ರಿ 9ಗಂಟೆ ಸುಮಾರಿಗೆ ಕಾಫಿ ಡೇಗೆ ಬಂದಿದ್ದ ಗ್ರಾಹಕ ವಾಶ್ ರೂಮ್ ಬಳಸುವ ವಿಚಾರಕ್ಕೆ ಗಲಾಟೆ ಮಾಡಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗ್ತಿದೆ.
ನಂತರ ಕಾಫಿ ಡೇಯಲ್ಲಿ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಯನ್ನು ಮ್ಯಾನೇಜರ್ ಪ್ರಶ್ನಿಸಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ಮ್ಯಾನೇಜರ್ ಜೊತೆ ಗಲಾಟೆ ಮಾಡಿದ್ದಾನೆ. ಈ ವೇಳೆ ಮ್ಯಾನೇಜರ್ ಮೇಲೆ ಗ್ರಾಹಕ ಹಲ್ಲೆ ಮಾಡಿದ್ದಾನೆ ಎನ್ನಲಾಗ್ತಿದೆ. ಹಲ್ಲೆಯಿಂದ ಗಾಯಗೊಂಡಿರುವ ಮ್ಯಾನೇಜರ್ ಅನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನೆ ಸಂಬಂಧ ಮ್ಯಾನೇಜರ್ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.