ಬೆಂಗಳೂರು: ಕೊರೊನಾ ಎಂದೊಡನೆ ದೂರ ಹೋಗುವವರ ಮಧ್ಯೆ ಸೋಂಕಿಗೆ ಬಲಿಯಾದವರನ್ನು ಸಾಗಿಸಲು ಆ್ಯಂಬುಲೆನ್ಸ್ ಇಲ್ಲದೆ ಮೃತರ ಕುಟುಂಬಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಆ್ಯಂಬುಲೆನ್ಸ್ ದೊರೆತರೂ ಚಾಲಕರು ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಉಚಿತವಾಗಿ ಆ್ಯಂಬುಲೆನ್ಸ್ ಸೇವೆ ಕಲ್ಪಿಸಿ ಶವಗಳಿಗೆ ಮುಕ್ತಿ ನೀಡುವ ಕಾರ್ಯವನ್ನೂ ಮಾಡಿಕೊಂಡು ಬರುತ್ತಿದ್ದಾರೆ ನಗರದ ಕೆಲ ಯುವಕರು.
ಮರ್ಸಿ ಏಂಜೆಲ್ಸ್ ಹೆಸರಿನ ಯುವಕರ ತಂಡ ಕಳೆದೊಂದು ವರ್ಷದಿಂದ ಮಾನವೀಯ ಸೇವೆಯಲ್ಲಿ ನಿರತವಾಗಿದೆ. ಕೊರೊನಾ ಮೊದಲ ಹಾಗೂ 2ನೇ ಅಲೆಯಲ್ಲಿ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದಿರುವುದು ಸಾವಿನ ಹೆಚ್ಚಳಕ್ಕೆ ಇನ್ನೊಂದು ಕಾರಣವಾಗ್ತಿದೆ. ಆಸ್ಪತ್ರೆಯಿಂದ ವಿದ್ಯುತ್ ಚಿತಾಗಾರಕ್ಕೆ ಶವ ಕೊಂಡ್ಯೊಯಲು ಉಚಿತವಾಗಿ ಆ್ಯಂಬುಲೆನ್ಸ್ ಸೇವೆಯನ್ನು ಈ ತಂಡ ಒದಗಿಸುತ್ತಿದೆ.
ಆ್ಯಂಬುಲೆನ್ಸ್ ಬೇಕಾದಲ್ಲಿ ಒಂದು ಕರೆ ಮಾಡಿದರೆ ಸಾಕು. ನೀವಿರುವ ಜಾಗಕ್ಕೆ ಆ್ಯಂಬುಲೆನ್ಸ್ ಬರಲಿದೆ. ಪಿಪಿಇ ಕಿಟ್ ಧರಿಸಿ ಈ ತಂಡದ ಸದಸ್ಯರೇ ಕೊರೊನಾದಿಂದ ಮೃತಪಟ್ಟವರ ದೇಹಕ್ಕೆ ಮುಕ್ತಿ ನೀಡುವ ಕೆಲಸ ಮಾಡಲಿದ್ದಾರೆ. ಕೊರೊನಾ 2ನೇ ಅಲೆಯಲ್ಲಿ ಕಳೆದ ಒಂದು ತಿಂಗಳಿಂದ ಇದುವರೆಗೂ 150ಕ್ಕೂ ಹೆಚ್ಚು ಶವಗಳನ್ನು ದಹನ ಮಾಡಿದ್ದಾರೆ. ಸೋಮವಾರ ಒಂದೇ ದಿನ 11 ಶವಗಳ ಅಂತ್ಯಸಂಸ್ಕಾರ ಮಾಡಿದ್ದಾರೆ.
1 ಸಾವಿರಕ್ಕೂ ಹೆಚ್ಚು ಶವಸಂಸ್ಕಾರ..
ಕಳೆದ ವರ್ಷದಿಂದ ಇದುವರೆಗೂ ನಗರದಲ್ಲಿ ಕೊರೊನಾದಿಂದ ಮೃತಪಟ್ಟ 1 ಸಾವಿರಕ್ಕೂ ಹೆಚ್ಚು ಮೃತದೇಹಗಳನ್ನ ಚಿತಾಗಾರಕ್ಕೆ ಕೊಂಡೊಯ್ದು ಮುಕ್ತಿ ಕೊಡಿಸಿದ್ದಾರೆ. ನಾನ್ ಕೋವಿಡ್ ರೋಗಿಗಳಿಗೂ ಆಯಾ ಧರ್ಮದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್ ಸೇರಿದಂತೆ ಆಯಾ ಧರ್ಮದ ಆಚರಣೆಗೆ ತಕ್ಕಂತೆ ವಿಧಿವಿಧಾನದ ಮೂಲಕ ಶವ ಸಂಸ್ಕಾರ ನೆರವೇರಿಸಿದ್ದಾರೆ ಈ ದಯಾಳುಗಳು.
ಮರ್ಸಿ ಏಂಜೆಲ್ಸ್ ತಂಡದ ತನ್ವೀರ್ ಅಹಮದ್ ನೇತೃತ್ವದ 40 ಮಂದಿ ಉತ್ಸಾಹಿ ಯುವಕರ ತಂಡ ಇದೆ. ಕಳೆದೊಂದು ವರ್ಷದಿಂದ ಮಾನವೀಯ ಕೆಲಸದಲ್ಲಿ ಇವರು ನಿರತರಾಗಿದ್ದಾರೆ. ಸುಮಾರು 20 ಮಂದಿ ವಾರಿಯರ್ಗಳು ತಂಡದಲ್ಲಿ ಸಕ್ರಿಯವಾಗಿದ್ದು, 2ನೇ ಅಲೆ ಕಾಣಿಸಿಕೊಳ್ಳುತ್ತಿದ್ದಂತೆ ಪ್ರತಿದಿನ ಇವರಿಗೆ ಹತ್ತಾರು ಮಂದಿ ಕರೆ ಮಾಡುತ್ತಾರೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಸೇರಿಸಲು ಹಾಗೂ ಮೃತಪಟ್ಟವರನ್ನು ಶವಾಗಾರಕ್ಕೆ ಕೊಂಡೊಯ್ಯಲು ಸಾರ್ವಜನಿಕರು ಕರೆ ಮಾಡುತ್ತಾರೆ. ಕರೆ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಮನೆ ಬಳಿ ಬಂದು ಶವ ಸಾಗಿಸಿ ಅಂತ್ಯಸಂಸ್ಕಾರ ಮಾಡಲಿದ್ದಾರೆ ಈ ತಂಡದ ಸದಸ್ಯರು.
ತುರ್ತು ಸಂದರ್ಭಗಳಲ್ಲಿ ಅಥವಾ ಚಿತಾಗಾರಕ್ಕೆ ಶವ ಕೊಂಡೊಯ್ಯಲು ಆ್ಯಂಬುಲೆನ್ಸ್ ನೆರವು ಬಯಸುವವರು ತನ್ವೀರ್ ಅಹಮದ್ ಅವರ ದೂರವಾಣಿ ಸಂಖ್ಯೆ 98861 94492 ಸಂಪರ್ಕಿಸಬಹುದಾಗಿದೆ.