ಬೆಂಗಳೂರು: ಅಣ್ಣನ ಮೇಲಿನ ದ್ವೇಷಕ್ಕೆ ಆತನ ತಂಗಿಯನ್ನು ಟಾರ್ಗೆಟ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಪಾಠ ಕಲಿಸಲು ಹೋದ ಯುವತಿ, ಆತನ ತಂಗಿ ಹೆಸರಲ್ಲಿ ಇನ್ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿ ಈಗ ಜೈಲು ಹಕ್ಕಿಯಾಗಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ, ಅಶ್ಲೀಲ ಚಿತ್ರಗಳನ್ನು ಹಾಕೋದು ಕಾಮನ್. ಅದರಲ್ಲೂ ಯುವತಿಯರ ನಂಬರ್ ಹಾಕಿ ಕೆಲವರು ವಿಕೃತಿ ಮೆರೆಯುತ್ತಾರೆ. ಇಂತಹದ್ದೇ ಘಟನೆಯೊಂದು ಈಶಾನ್ಯ ವಿಭಾಗದ ಸೈಬರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ, ಈ ಪ್ರಕರಣದಲ್ಲಿ ಒಂದು ಟ್ವಿಸ್ಟ್ ಇದೆ. ಅಣ್ಣನ ಮೇಲಿನ ಸಿಟ್ಟಿಗೆ ಆತನ ತಂಗಿಯ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆಯಲಾಗಿದ್ದು, ಅದರಲ್ಲಿ ಆಕೆಯ ಮಾರ್ಫ್ ಮಾಡಿದ ಫೋಟೋಗಳನ್ನ ಸಹ ಅಪ್ಲೋಡ್ ಮಾಡಲಾಗಿದೆ.
ಜೊತೆಗೆ ನಾನು ಕಾಲ್ ಗರ್ಲ್ ನನ್ನ ಸಂಪರ್ಕಿಸೋಕೆ ಈ ನಂಬರ್ಗೆ ಕರೆ ಮಾಡಿ ಅಂತಲೂ ಪೋಸ್ಟ್ ಮಾಡಲಾಗಿದೆ. ಅಷ್ಟೇ ಅಲ್ಲ ಯಾವ ಯುವತಿಯ ಹೆಸರಲ್ಲಿ ನಕಲಿ ಖಾತೆ ತೆರೆಯಲಾಗಿರುತ್ತೋ ಆಕೆಯ ಓರಿಜಿನಲ್ ಅಕೌಂಟ್ ಅನ್ನೂ ಫಾಲೋ ಮಾಡಲಾಗಿದೆ.
ನಕಲಿ ಖಾತೆ ತೆರೆಯುತ್ತಿದ್ದಂತೆಯೇ ಯುವಕನ ತಂಗಿಗೆ ನೂರಾರು ಕರೆಗಳು ಬರಲಾರಂಭಿಸಿದ್ದವು. ಬಳಿಕ ಈ ಬಗ್ಗೆ ಮಾಹಿತಿ ತಿಳಿದು ಯುವತಿ ಹಾಗೂ ಆಕೆಯ ಕುಟುಂಬದವರು ಈಶಾನ್ಯ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕಿಂಗ್ ವಿಷಯವೊಂದು ತಿಳಿಯುತ್ತೆ. ಯಾವುದೋ ಸೈಕೋ ಹುಡುಗ ಈ ಕೆಲಸ ಮಾಡಿರಬಹುದು ಅಂತ ತನಿಖೆ ಆರಂಭಿಸುವ ಅವರಿಗೆ ಈ ಕೃತ್ಯದ ಹಿಂದೆ ಇರೋದು ಒಬ್ಬ ಯುವತಿ ಅನ್ನೋದು ತಿಳಿಯುತ್ತೆ. ಅಷ್ಟೇ ಅಲ್ಲ ದೂರು ನೀಡಿದ ಯುವತಿಯ ಪರಿಚಯದವಳೇ ಅನ್ನೋದು ಬೆಳಕಿಗೆ ಬಂದಿದೆ.
ದೂರು ನೀಡಿದ ಯುವತಿಯ ಅಣ್ಣನ ಫ್ರೆಂಡ್ಗೆ ಈ ಕಿರಾತಕಿ ಲವರ್ ಆಗಿರುತ್ತಾಳೆ. ಒಮ್ಮೆ ಯುವತಿಯ ಅಣ್ಣ ಈಕೆ ಸರಿಯಲ್ಲ ಪ್ರೀತಿಸಬೇಡ ಅಂತ ಹೇಳಿದ್ದನಂತೆ. ಈ ವಿಷಯ ತಿಳಿದ ಮೇಲೆ ಆಕೆ ಸೇಡು ತೀರಿಸಿಕೊಳ್ಳಲು ಆತನ ತಂಗಿ ಹೆಸರಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿ, ಯುವತಿಯ ಒರಿಜಿನಲ್ ಖಾತೆಗೆ ಕೆಟ್ಟದಾಗಿ ಮೆಸೇಜ್ ಸಹ ಕಳುಹಿಸಲಾರಂಭಿಸಿದ್ದಳಂತೆ.
ಇನ್ನು ನೊಂದ ಯುವತಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆಯೇ ಆ ಕಿರಾತಕಿ ನಕಲಿ ಖಾತೆ ಡಿಲೀಟ್ ಮಾಡಿದ್ದಾಳೆ. ಅಲ್ಲದೇ ತನಗೇನೂ ಗೊತ್ತಿಲ್ಲದಂತೆ ಸುಮ್ಮನಾಗಿದ್ದಾಳೆ. ತನಿಖೆ ಆರಂಭಿಸಿದ ಪೊಲೀಸರು, ಬಿಕಾಂ ಓದುತ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
(ಓದಿ: ಬೆಂಗಳೂರು ಏರ್ಪೋರ್ಟ್ನಲ್ಲಿ ವಾಶ್ ರೂಮ್ಗೆ ಹೋಗಿ ಬರುವಷ್ಟರಲ್ಲೇ ಬ್ಯಾಗ್ ಕಳವು)