ಬೆಂಗಳೂರು : ಮದುವೆಗೆ ಬಟ್ಟೆ ಖರೀದಿ ಮಾಡುವ ನೆಪದಲ್ಲಿ ಹೋಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಖದೀಮರ ಗುಂಪನ್ನು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಭರತ್, ಸುನೀತಾ, ಶಿವರಾಮ್ ಪ್ರಸಾದ್, ವೆಂಕಟೇಶ್, ರಾಣಿ, ಶಿವಕುಮಾರ್ ಬಂಧಿತರು.
ಗ್ರಾಹಕರ ಸೋಗಿನಲ್ಲಿ ಒಂದು ತಂಡವಾಗಿ ಬಟ್ಟೆ ಅಂಗಡಿಗಳಿಗೆ ಹೋಗುತ್ತಿದ್ದ ಆರೋಪಿಗಳು, ಮನೆಯಲ್ಲಿ ಮದುವೆ ಕಾರ್ಯಕ್ರಮ ಇದೆ ಎನ್ನುತ್ತಲೇ ದುಬಾರಿ ಬೆಲೆಯ ಸೀರೆಗಳನ್ನು ನೋಡುತ್ತಿದ್ದರು. ಐವತ್ತು ಅರವತ್ತು ಸೀರೆಗಳನ್ನು ನೋಡುತ್ತಾ ಅಂಗಡಿಯವರ ಗಮನ ಬೇರೆಡೆ ಸೆಳೆದು ಒಂದೆರಡು ಸೀರೆಗಳನ್ನು ಕಳ್ಳತನ ಮಾಡಿ ತಮ್ಮ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದರು. ಕೆಲಸ ಆದ ಮೇಲೆ, 'ಸೀರೆಗಳು ಚೆನ್ನಾಗಿಲ್ಲ, ನಮ್ಮ ಬಜೆಟ್ಗೆ ಹೊಂದುತ್ತಿಲ್ಲ' ಎಂದು ಸ್ಥಳದಿಂದ ಕಾಲ್ಕೀಳುತ್ತಿದ್ದರು. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಈ ಖತರ್ನಾಕ್ ಕಳ್ಳರ ಕೈಚಳಕವನ್ನು ಗಮನಿಸಿದ ಅಂಗಡಿ ಮಾಲೀಕರೊಬ್ಬರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿಗಳ ಪತ್ತೆಗಾಗಿ ಹೈಗ್ರೌಂಡ್ಸ್ ಹಾಗೂ ಅಶೋಕನಗರ ಠಾಣಾ ಪೊಲೀಸ್ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಏಳು ಜನ ಆರೋಪಿಗಳನ್ನ ಬಂಧಿಸಲಾಗಿದ್ದು, ಸರಿಸುಮಾರು ಹತ್ತು ಲಕ್ಷ ರೂ ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಸ್.ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ : Bengaluru crime : 1,500 ಎಳನೀರು ಕಳ್ಳತನ! UPI ಪಾವತಿಯಲ್ಲಿ ಸಿಕ್ಕಿಬಿದ್ದ 'ಎಳನೀರು ಕಳ್ಳರು'!
ಇನ್ನು ರಸ್ತೆ ಬದಿಯಲ್ಲಿ ಮಾರಾಟಕ್ಕಿಡುತ್ತಿದ್ದ ಎಳನೀರನ್ನು ಕದ್ದು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣಾ ಪೊಲೀಸರು ಇದೇ ತಿಂಗಳ 10 ನೇ ತಾರೀಖಿನಂದು ಬಂಧಿಸಿದ್ದರು. ಟಾಟಾ ಏಸ್ ವಾಹನದಲ್ಲಿ ಬಂದು 1,500 ಎಳನೀರು ಕದ್ದು ತಲೆಮರೆಸಿಕೊಂಡಿದ್ದ ಗೌತಮ್, ರಘು ಹಾಗೂ ಮಣಿಕಂಠ ಬಂಧಿತ ಆರೋಪಿಗಳು. ಇವರು ಆಗಸ್ಟ್ 7 ರಂದು ಮುಂಜಾನೆ ಕಳ್ಳತನ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ವಿರುದ್ಧ ಅಂಗಡಿ ಮಾಲೀಕ ಸಲೀಂ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಆರೋಪಿಗಳ ಬೆನ್ನುಬಿದ್ದ ಪೊಲೀಸರು 60 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ, ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ : Davanagere crime : ವೈದ್ಯರ ಮನೆಗೆ ಕನ್ನ; ₹22 ಲಕ್ಷ ನಗದು, ಚಿನ್ನಾಭರಣ ಕಳ್ಳತನ
ವೈದ್ಯರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕದ್ದು ಪರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ಇತ್ತೀಚೇಗೆ ನಡೆದಿತ್ತು. ವೈದ್ಯ ಸಚಿನ್ ಬೊಂಗಾಳೆ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ 22 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮೈಸೂರು : ₹1.34 ಕೋಟಿ ಮೌಲ್ಯದ ವಸ್ತುಗಳು ವಾರಸುದಾರರಿಗೆ ವಾಪಸ್