ಬೆಂಗಳೂರು: ಸಿಲಿಕಾನ್ ಸಿಟಿಯ ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆ ವೈದ್ಯರ ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಾಂಬ್ ಸ್ಫೋಟವೊಂದರಲ್ಲಿ ಕಣ್ಣು ಕಳೆದುಕೊಂಡಿದ್ದ ಯೆಮೆನ್ ದೇಶದ ಮಹಿಳೆಗೆ ಕಣ್ಣು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮತ್ತೆ ಕಣ್ಣು ಕಾಣಿಸುವಂತೆ ಮಾಡಿದ್ದಾರೆ.
ಯೆಮೆನ್ ದೇಶದಲ್ಲಿ ನಡೆದ ಬಾಂಬ್ ಸ್ಫೋಟವೊಂದರಲ್ಲಿ ಆ ದೇಶದ 53 ವರ್ಷದ ಅಬ್ದೆಲ್ಲಾ ಇಲ್ಲಾಂ ಅವರಿಗೆ ಕಲ್ಲು ತೂರಿಬಂದು ಬಲ ಕಣ್ಣಿಗೆ ಬಿದ್ದಿದ್ದರಿಂದ ಗಂಭೀರ ಸ್ವರೂಪದಲ್ಲಿ ಕಣ್ಣು ಗಾಯಗೊಂಡಿತ್ತು. ಹೀಗಾಗಿ, ಸಮೀಪ ದೃಷ್ಟಿಯನ್ನು ಕಳೆದುಕೊಂಡಿದ್ದರು. ಅವರ ಕಣ್ಣಿನಲ್ಲಿ ನೀರು, ತುರಿಕೆ ಹಾಗೂ ಸುಡುವ ರೀತಿ ಅನುಭವವಾಗುತ್ತಿತ್ತು. ಅವರು ನಮ್ಮ ಆಸ್ಪತ್ರೆಗೆ ಬಂದಾಗ ಶಸ್ತ್ರಚಿಕಿತ್ಸೆಯ ನಂತರ ಕೇವಲ 2 ದಿನಗಳಲ್ಲಿ ಸಂಪೂರ್ಣ ದೃಷ್ಟಿ ಪಡೆದುಕೊಂಡಿದ್ದಾರೆ ಎನ್ನುತ್ತಾರೆ ಆಸ್ಪತ್ರೆಯ ಹಿರಿಯ ವೈದ್ಯರಾದ ನಾಗರಾಜ್.
ಅಬ್ದೆಲ್ಲಾ ಇಲ್ಲಾಂ ಮಾತನಾಡಿ, ಈ ಹಿಂದೆ ನನ್ನ ಒಂದು ಕಣ್ಣು ಹಾಳಾಗಿತ್ತು. ಬಾಂಬ್ ಸ್ಫೋಟದಿಂದ ಮತ್ತೊಂದು ಕಣ್ಣು ಕಾಣದಾಗಿತ್ತು. ಇಡೀ ಜಗತ್ತನ್ನೇ ಕಳೆದುಕೊಂಡೆ ಎಂದುಕೊಂಡಿದ್ದೆ. ಆದರೆ ವೈದ್ಯರ ಚಿಕಿತ್ಸೆಯ ನಂತರ ಹೆಚ್ಚು ಪ್ರಖರವಾಗಿ ಕಣ್ಣು ಕಾಣುವಂತಾಗಿದೆ ಎಂದು ಸಂತಸಪಟ್ಟರು.
ಇಂದು ಗ್ಲುಕೋಮಾ ದಿನ
2020ರ ವೇಳೆಗೆ ವಿಶ್ವದಲ್ಲಿ ಗ್ಲುಕೋಮಾದಿಂದ ಬಳಲುವವರ ಸಂಖ್ಯೆ 16 ದಶಲಕ್ಷ ತಲುಪಲಿದೆ. ಪ್ರಸ್ತುತ ಭಾರತದಲ್ಲಿ 12 ದಶಲಕ್ಷ ಮಂದಿ ಗ್ಲುಕೋಮಾಗೆ ತುತ್ತಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ 4.5 ದಶಲಕ್ಷ ಮಂದಿ ಗ್ಲುಕೋಮಾದಿಂದ ಕುರುಡರಾಗುತ್ತಿದ್ದಾರಂತೆ.
ಈ ಎಲ್ಲಾ ಅಂಕಿ ಅಂಶಗಳನ್ನು ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ನಿರ್ದೇಕರಾದ ಡಾ. ರವಿ ನೀಡಿದ್ದು, ಪ್ರತಿ ವರ್ಷ ಮಾರ್ಚ್ 10 ರಿಂದ 16 ರವರೆಗೆ ವಿಶ್ವ ಗ್ಲುಕೋಮಾ ಸಪ್ತಾಹ ನಡೆಸಲಾಗುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಸ್ಟಿರಾಯ್ಡ್ ಚುಚ್ಚುಮದ್ದು ಬಳಕೆಯಿಂದ ಗ್ಲುಕೋಮಾ ಸಮಸ್ಯೆ ಕಾಡಲಿದ್ದು, ದೃಷ್ಟಿ ಕಳೆದುಕೊಳ್ಳಲು ಇದು ಕೂಡ 3ನೇ ಅತಿ ಹೆಚ್ಚು ಕಾರಣವಾಗಿದೆ. ಆರಂಭಿಕ ಹಂತದಲ್ಲೇ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎನ್ನುತ್ತಾರೆ ವೈದ್ಯರು.